ಬೆಳ್ತಂಗಡಿ: ಶಿಕ್ಷಣ ಮತ್ತು ಸಮಾಜ ಸೇವೆಗೆ ಆದ್ಯತೆ ನೀಡುತ್ತಿರುವ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ವತಿಯಿಂದ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಹತ್ವದ ನೆರವು ನೀಡಲಾಯಿತು.
ಸೇವಾ ಕಾರ್ಯಕ್ರಮದ ಅಂಗವಾಗಿ ಸುಲ್ಕೇರಿ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ರೂ.1 ಲಕ್ಷ ಆರ್ಥಿಕ ಸಹಾಯವನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು. ಜೊತೆಗೆ ಹೊಕ್ಕಡಿಗೋಳಿ ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಳೆಗಾಲದ ಹಿನ್ನೆಲೆಯಲ್ಲಿ ಕೊಡೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಸಂಪೂರ್ಣ ಪ್ರಯೋಜಕತ್ವವನ್ನು ಶ್ರೀ ಗುರು ಕಮ್ಯುನಿಕೇಶನ್ಸ್‌ನ ಮಾಲೀಕರೂ, ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಆಗಿರುವ ರಾಘವೇಂದ್ರ ಭಟ್ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು ಹಾಗೂ ನೂತನ ಶೈಕ್ಷಣಿಕ ವರ್ಷದ ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಅಧ್ಯಕ್ಷೆ ವಿಜಯ ಫರ್ನಾಂಡೀಸ್, ಪದಾಧಿಕಾರಿಗಳಾದ ಕಿರಣ್ ಕುಮಾರ್ ಮಂಜಿಲ, ಸುರೇಶ್ ಶೆಟ್ಟಿ, ಶಶಿಧರ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಶಾಲೆಯ ಗೌರವಾಧ್ಯಕ್ಷ ಗಣೇಶ ಹೆಗಡೆ, ಅಧ್ಯಕ್ಷ ರಾಜು ಪೂಜಾರಿ, ಮುಖ್ಯೋಪಾಧ್ಯಾಯ ಪ್ರಮೋದ್ ಕುಮಾರ್, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲೆಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಈ ನೆರವು ಮಹತ್ತರ ಉತ್ತೇಜನ ನೀಡಲಿದ್ದು, ಇಂತಹ ಸಮಾಜಮುಖಿ ಕಾರ್ಯಗಳಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಶಾಲಾ ಆಡಳಿತ ಮಂಡಳಿ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಹಾಗೂ ದಾನಿಗಳಾದ ರಾಘವೇಂದ್ರ ಭಟ್ ಅವರಿಗೆ ಕೃತಜ್ಞತೆ ಸಲ್ಲಿಸಿದೆ.


