ಮಂಗಳೂರು: ತೆಂಗಿನಕಾಯಿ ಹೆಕ್ಕಲು ಬಾವಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನೀರುಮಾರ್ಗ ಸಮೀಪದ ನೀರಾಳದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ನೀರಾಳ ನಿವಾಸಿ ಮಹಾಬಲ ಪೂಜಾರಿ (56) ಮೃತಪಟ್ಟವರು.

ಕಳೆದ ಕೆಲವು ದಿನಗಳಿಂದ ಸುರಿದ ಗಾಳಿ-ಮಳೆಯಿಂದ ತೆಂಗಿನಕಾಯಿಗಳು ಬಾವಿಗೆ ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಮಹಾಬಲ ಪೂಜಾರಿ ಅವರು ಮನೆ ಸಮೀಪದ ಬಾವಿಗೆ ಇಳಿದು ತೆಂಗಿನಕಾಯಿ ಹೆಕ್ಕುತ್ತಿದ್ದರು. ಸುಮಾರು 5ರಿಂದ 6 ತೆಂಗಿನಕಾಯಿಗಳನ್ನು ಮೇಲಕ್ಕೆ ಎಸೆದ ಬಳಿಕ ಉಳಿದ ಕಾಯಿ ಹೆಕ್ಕಲು ಮುಂದಾದ ವೇಳೆ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬಹಳ ಹೊತ್ತಾದರೂ ಮನೆಗೆ ಮರಳದಿದ್ದುದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಬಳಿಕ ಬಾವಿಯಲ್ಲಿ ಪರಿಶೀಲಿಸಿದಾಗ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



