Breaking
26 May 2026, Tue

ಮಂಗಳೂರು: ಟ್ಯಾಬ್ಲೆಟ್ ಆರೀಫ್ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಸಿಸಿಬಿ ಬಲೆಗೆ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ ‘ಟ್ಯಾಬ್ಲೆಟ್ ಆರೀಫ್’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಮೇ 25 ರಂದು ಬಂಧಿಸಿದ್ದಾರೆ.

ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು (21) ಬಂಧಿತ ಆರೋಪಿ. ಈತ ಮೃತ ರೌಡಿಶೀಟರ್ ಟೊಪ್ಪಿ ನೌಫಾಲ್‌ನ ಸಹೋದರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 27ರಂದು ಬೆಳಗಿನ ಜಾವ ತೊಕ್ಕೊಟ್ಟು ಫ್ಲೈಓವರ್ ಮೇಲಿಂದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಆರೀಫ್ ಅವರನ್ನು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಡಿಕ್ಕಿ ಹೊಡೆದು ಕೆಡವಿದ ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.

ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಬಳಿಕ ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.

ಬಂಧಿತ ಆರೋಪಿ ವಿರುದ್ಧ 2025ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ ಹಾಗೂ 2024ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿವೆ.

ತನಿಖೆ ವೇಳೆ, 2026ರ ಫೆಬ್ರವರಿಯಲ್ಲಿ ಆರೀಫ್ ಹುಸೇನ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ ಸಭೆಯಲ್ಲಿ ಆರೋಪಿ ಹಾಜರಿದ್ದ ಬಗ್ಗೆ ಹಾಗೂ ಮಾರ್ಚ್ 27 ರಂದು ನಡೆದ ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಮೊಹಮ್ಮದ್ ರಿಫಾತ್ ಆಲಿ, ಇಬ್ರಾಹಿಂ ಖಲೀಲ್, ಅಶ್ಫಕ್ ಅಲಿಯಾಸ್ ಜುಟ್ಟು ಅಶ್ಫಕ್, ಉಮ್ಮರ್ ಫಾರೂಕ್ ಇರ್ಫಾನ್, ಮೊಹಮ್ಮದ್ ಶಾಕೀರ್, ಮೊಹಮ್ಮದ್ ರಿಜ್ವಾನ್ ಅಲಿಯಾಸ್ ರಿಜ್ವಾನ್, ಮೊಹಮ್ಮದ್ ಇರ್ಷಾದ್ ಅಲಿಯಾಸ್ ಅಕುಡು, ಮಹಮ್ಮದ್ ಹರ್ಷಾದ್, ನಿಶಾಕ್ ಅಲಿಯಾಸ್ ಪುಚ್ಚೆ ನಿಶಾಕ್, ಬಿ. ಜುನೈದ್ ಅಲಿಯಾಸ್ ಕೊಕ್ಕಡ ಜುನೈದ್ ಹಾಗೂ ಮೊಹಮ್ಮದ್ ಸುಹೇಲ್ ಅಲಿಯಾಸ್ ಚಿಯಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಸ್ತುತ ಬಂಧಿತ ಆರೋಪಿಗಳೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದು, ಅವರ ವಿರುದ್ಧ ಕೋಕಾ ಕಾಯ್ದೆಯಡಿ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *