ಮೈಸೂರು: ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಕುಂಭಾಭಿಷೇಕ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಆರಂಭಗೊಂಡಿದೆ.


ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ. ಡಾ. ಭಾಷ್ಯಂ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳಗ್ಗಿನಿಂದಲೇ ಪೂಜಾ ವಿಧಿವಿಧಾನಗಳು ನೆರವೇರಿದವು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಶ್ರೀ ಸ್ವಾಮಿಯ ದರ್ಶನದೊಂದಿಗೆ ಪ್ರಸಾದ ವಿತರಿಸಲಾಯಿತು.

ಮೇ.25ರ ಸೋಮವಾರ ಬೆಳಗ್ಗೆ ಶ್ರೀ ಯೋಗಾನರಸಿಂಹಸ್ವಾಮಿಗೆ ಅಭಿಷೇಕ ಹಾಗೂ ಲಕ್ಷಾರ್ಚನೆ ಜರುಗಿತು. ಬಳಿಕ ಮಹಿಳಾ ಸಂಘದವರಿಂದ ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.

ಮೇ.26ರ ಮಂಗಳವಾರ ಬೆಳಗ್ಗೆ 9 ಗಂಟೆಗೆ ಶ್ರೀ ಯೋಗಾ ನರಸಿಂಹ ಸ್ವಾಮಿಯವರಿಗೆ ಸಹಸ್ರ ಕಳಶಾಭಿಷೇಕ ಹಾಗೂ ಮಹಿಳಾ ಸಂಘದವರಿಂದ ಸೌಂದರ್ಯ ಲಹರಿ ಪಾರಾಯಣ ನಡೆಯಲಿದೆ.

ಹಾಗೇಯೇ ಮೇ.27ರ ಬುಧವಾರ ಬೆಳಗ್ಗೆ 9 ಗಂಟೆಗೆ ಶ್ರೀ ಯೋಗಾನರಸಿಂಹಸ್ವಾಮಿಗೆ ಕುಂಭಾಭಿಷೇಕ, ಅಖಂಡ ಮಹಾ ಸುದರ್ಶನ ಹೋಮ ಮತ್ತು ಮಹಿಳಾ ಸಂಘದವರಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.

ಬಳಿಕ ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಬಳಿಕ 12.30ರನಂತರ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


