ಬಂಟ್ವಾಳ: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನಿವಾಸಕ್ಕೆ ಭೇಟಿ ನೀಡಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಚಿವರನ್ನು ಹೂಗುಚ್ಚ ಹಾಗೂ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಸಚಿವರು ಬಳಿಕ ಗುರುಪುರ ಜಂಗಮ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಹಾಗೂ ವಜ್ರದೇಹಿ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಮಠಗಳ ಜೀರ್ಣೋದ್ಧಾರ ಕಾಮಗಾರಿಗಳ ವೀಕ್ಷಣೆ ಕೂಡ ನಡೆಸಿದರು.

ನಂತರ ಬಂಟ್ವಾಳ ಶಾಸಕರ ಗಂಜಿಮಠದ ಒಡ್ಡೂರು ಫಾರ್ಮ್ಸ್‌ಗೆ ಭೇಟಿ ನೀಡಿದ ಸಚಿವರು ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಕುರಿತು ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಮುಂದಿನ ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಕಾರ್ಯತಂತ್ರಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಚಿವರ ಬೇಟಿ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾಮಗಾರಿಗಳ ಬೇಡಿಕೆ ಕುರಿತು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮನವಿಯನ್ನು ನೀಡಿದರು ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧ ಪಟ್ಟಂತೆ ಸಾರ್ವಜನಿಕರ ಅನೇಕ ಬೇಡಿಕೆಗಳಿದ್ದು ಅವುಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕೆಂದು ಎಂದು ಮನವಿಯನ್ನು ಮಾಡಿದರು.

ಮನವಿಯ ಪ್ರಮುಖ ಬೇಡಿಕೆಗಳು:
- ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಬಳಿಯಿಂದ ದೈಪಲ ಸಂಪರ್ಕ ರಸ್ತೆಗೆ ಆಜ್ಜಿಬೆಟ್ಟು ಶಾಲಾ ಬಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡಿಕೊಡುವುದು.
- ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ಕುಂಬೋಧರಿ ಮಠ ದೇವಸ್ಥಾನದಿಂದ ಕುಲಾಲ ಭವನದ ಸಂಪರ್ಕ ರಸ್ತೆಗೆ ಕುಂಭೋಧರಿ ದೇವಸ್ಥಾನ ಬಳಿ ಅಂಡರ್‌ಪಾಸ್ ರಚನೆ ಮಾಡುವುದು.
- ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ರೈಲ್ವೆ ನಿಲ್ದಾಣ ಬಳಿ ಹಿಂದೂ ರುದ್ರ ಭೂಮಿ ಮತ್ತು ರೈಲ್ವೆ ವಸತಿ ನಿಲಯ ಸಂಪರ್ಕ ರಸ್ತೆ ಅಭಿವ್ರದ್ದಿ ಮಾಡಿಕೊಡಿ.
- ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ದೇವಸ್ಯ-ಕುದ್ರೆಮಾರ್-ತೋಟ ಭಾಗಕ್ಕೆ ಸಂಪರ್ಕಿಸಲು ದೇವಸ್ಯ ಕುದ್ರೆಮಾರ್ ಎಂಬಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡುವುದು.
- ಬಂಟ್ವಾಳ ತಾಲೂಕು ನೆಟ್ಟಮುಡ್ನರು ಗ್ರಾಮದ ನೇರಳಕಟ್ಟೆ ರೈಲ್ವೆ ನಿಲ್ದಾಣದ ಬಳಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಂಚರಿಸಲು ಪುಟ್ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಒತ್ತಾಯ.
- ಮಂಗಳೂರು-ಬೆಂಗಳೂರು ಸಂಪರ್ಕ ರೈಲುಗಳು ಪ್ರಸ್ತುತ ನೇರಳಕಟ್ಟೆ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಇದರಿಂದಾಗಿ ಆಸುಪಾಸಿನ ಪ್ರಯಾಣಕರಿಗೆ ಅನಾನುಕೂಲ ಆಗುತ್ತಿದ್ದು ಮಂಗಳೂರು ಬೆಂಗಳೂರು ಸಂಪರ್ಕ ರೈಲುಗಳಿಗೆ ನೇರಳಕಟ್ಟೆ ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಹೀಗೆ ಒಟ್ಟು ಆರು ಬೇಡಿಕೆಗಳ ಮನವಿಯನ್ನು ಸಚಿವರಿಗೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೂಜಾ ಪೈ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಮಾಜಿ ಮೇಯರ್ ಕವಿತಾ ಸನಿಲ್, ಹಾಸನ ಜಿಲ್ಲೆಯ ಮಾಜಿ ಜಿ.ಪಂ.ಸದಸ್ಯ ಅಮಿತ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ,ಜಿಲ್ಲಾ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಕೆ.ಎಂ.ಎಫ್ ನಿರ್ದೇಶಕ ನಂದರಾಮ ರೈ,ಸೋಹನ ಅಧಿಕಾರಿ,ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ವಾಳ,ಸಚಿನ್ ಅಡಪ, ಗ್ರಾ.ಪಂ.ಮಾಜಿ ಸದಸ್ಯ ಗಣೇಶ್ ರೈ ಮಾಣಿ,ಬಿಜೆಪಿ ಬಂಟ್ವಾಳ ಮಾಧ್ಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಮುಖರಾದ ಪ್ರಭಾಕರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರ್ಲ, ಪ್ರಣಾಮ್ ರಾಜ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.




