ಪಣಂಬೂರು: ನವ ಮಂಗಳೂರು ಬಂದರಿಗೆ ಈ ಪ್ರವಾಸಿ ಸಾಲಿನ ಐದನೇ ಹಾಗೂ ಕೊನೆಯ ಅಂತಾರಾಷ್ಟ್ರೀಯ ಕ್ರೂಸ್ ಹಡಗು ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್ ಆಗಮಿಸಿತು.

ಬಹಾಮಾಸ್ ಧ್ವಜ ಹೊಂದಿರುವ ಈ ಐಷಾರಾಮಿ ಕ್ರೂಸ್ ಹಡಗನ್ನು ನಾರ್ವೇಜಿಯನ್ ಕ್ರೂಸ್ ಲೈನ್ ಸಂಸ್ಥೆ ನಿರ್ವಹಿಸುತ್ತಿದ್ದು, ಮಾಲೆ, ಕೊಚ್ಚಿನ್, ಮಂಗಳೂರು, ಗೋವಾ, ಮುಂಬೈ ಮಾರ್ಗದ ಪ್ರವಾಸದ ಭಾಗವಾಗಿ ಬಂದರಿಗೆ ತಲುಪಿತು. ಹಡಗಿನಲ್ಲಿ 427 ಪ್ರಯಾಣಿಕರು ಹಾಗೂ 372 ಸಿಬ್ಬಂದಿ ಇದ್ದರು.

ಹಡಗು ಬಂದ ತಕ್ಷಣ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗಿದ್ದು, ನಗರ ವೀಕ್ಷಣೆ, ಪ್ರವಾಸೋದ್ಯಮ ಸೌಲಭ್ಯಗಳು ಹಾಗೂ ಮಾರ್ಗದರ್ಶಿತ ಧ್ಯಾನ ಪ್ರವಾಸ ಕಾರ್ಯಕ್ರಮಗಳನ್ನು ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮತ್ತು ಸಂಬಂಧಿತ ಸಂಸ್ಥೆಗಳು ಆಯೋಜಿಸಿತ್ತು.

ಈ ಪ್ರವಾಸಿ ಋತುವಿನಲ್ಲಿ ಒಟ್ಟು ಐದು ಕ್ರೂಸ್ ಹಡಗುಗಳು ನವ ಮಂಗಳೂರು ಬಂದರಿಗೆ ಆಗಮಿಸಿದ್ದು, 2,079 ಕ್ರೂಸ್ ಪ್ರಯಾಣಿಕರನ್ನು ನಿರ್ವಹಿಸಲಾಗಿದೆ.


