Breaking
4 Sep 2026, Fri

ಕರಾವಳಿಯಲ್ಲಿ ಮೇ 25ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಸೂಚನೆ

ದಕ್ಷಿಣ ಕನ್ನಡ/ಉಡುಪಿ: ಕರ್ನಾಟಕ ಕರಾವಳಿಯ ಮೀನುಗಾರರಿಗೆ ಮಹತ್ವದ ಮುನ್ನೆಚ್ಚರಿಕೆ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಹಾಗೂ ಬಿರುಗಾಳಿ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆ, ಮೇ 20ರಿಂದ ಮೇ 25ರವರೆಗೆ ಸಮುದ್ರಕ್ಕಿಳಿಯದಂತೆ ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಕರ್ನಾಟಕ, ಕೇರಳ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್ ಹಾಗೂ ಕೊಮೊರಿನ್ ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಕೆಲ ಸಂದರ್ಭಗಳಲ್ಲಿ ಗಾಳಿಯ ವೇಗ 60 ಕಿಲೋಮೀಟರ್‌ವರೆಗೂ ತಲುಪಬಹುದು ಎಂದು ಎಚ್ಚರಿಸಲಾಗಿದೆ.

ನೈಋತ್ಯ ಅರಬ್ಬಿ ಸಮುದ್ರದ ಭಾಗಗಳಲ್ಲಿ, ವಿಶೇಷವಾಗಿ ಸೊಮಾಲಿಯಾ ಕರಾವಳಿ ಸುತ್ತಮುತ್ತ ಗಾಳಿಯ ತೀವ್ರತೆ ಗಂಟೆಗೆ 45 ರಿಂದ 55 ಕಿಲೋಮೀಟರ್‌ಗೆ ತಲುಪಲಿದ್ದು, ಗರಿಷ್ಠ 65 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಅಲ್ಲದೆ ಮನ್ನಾರ್ ಕೊಲ್ಲಿ, ದಕ್ಷಿಣ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರ ಪ್ರದೇಶಗಳಲ್ಲಿಯೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ಸಮುದ್ರಕ್ಕಿಳಿದಿರುವ ಮೀನುಗಾರರು ತಕ್ಷಣ ಸುರಕ್ಷಿತವಾಗಿ ದಡ ಸೇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಎಲ್ಲಾ ಮೀನುಗಾರಿಕಾ ಬಂದರುಗಳಿಗೆ ಅಲರ್ಟ್ ಸಂದೇಶ ರವಾನಿಸಲಾಗಿದೆ.

Leave a Reply

Your email address will not be published. Required fields are marked *