ಮಂಗಳೂರು: “ನಾನು ಕೊಂಕಣಿಯಲ್ಲಿ ಬರೆಯಲು ಆರಂಭಿಸುವಾಗಲೂ ವಲ್ಲಿ ವಗ್ಗ ಬರೆಯುತ್ತಿದ್ದರು, ಈಗಲೂ ಅದೇ ಸಾತತ್ಯದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರಿಯರಾದ ನಮಗೆ ಅವರು ದೊಡ್ಡಣ್ಣನಂತೆಯೇ. ಅಭಿಪ್ರಾಯ ಭೇದಗಳಿರುವ ಕೊಂಕಣಿ ಲೇಖಕರನ್ನು ಒಗ್ಗೂಡಿಸಿ, ಸಂಬಂಧಗಳನ್ನು ದಾರದಲ್ಲಿ ಪೋಣಿಸುವ ದರ್ಜಿಯಂತೆ ಕಾರ್ಯನಿರ್ವಹಿಸಿದ್ದಾರೆ. ಕೊಂಕಣಿ ಸಾಹಿತ್ಯ ಮತ್ತು ಸಂಘಟನೆಗೆ ಅವರ ಸೇವೆ ಸ್ತುತ್ಯರ್ಹ. ಆರು ದಶಕಗಳಿಂದ ನಿರಂತರ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಅವರ ಸಾಹಿತ್ಯವನ್ನು ಸಂಭ್ರಮಿಸುವುದೇ ಅವರಿಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಗೌರವ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ಕೊಂಕಣಿ ಭಾಷಾ ಸಲಹಾ ಸಮಿತಿಯ ಸಂಚಾಲಕರಾದ ಕವಿ ಮೆಲ್ವಿನ್ ರೊಡ್ರಿಗಸ್ ಅಭಿಪ್ರಾಯಪಟ್ಟರು.

ಅವರು ಮೈಸೂರು ಕಾವ್ಯನಾಮದಿಂದ ಪ್ರಸಿದ್ಧರಾಗಿರುವ, ಮೂಲತಃ ನಿರ್ಕಾಣ್–ವಗ್ಗದವರಾದ ಹಾಗೂ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಹಿರಿಯ ಸಾಹಿತಿ ವಲೇರಿಯನ್ ಡಿಸೊಜಾ ಅವರ ‘ವಿಂಚ್ಣಾರ್ ಕಾಣಿಯೊ’ (ಆಯ್ದ ಕಥೆಗಳು) ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ನಡೆಯಿತು.

“ಕಥಾಸಾಹಿತ್ಯದಲ್ಲಿ ನಿಖರತೆ, ಔದಾರ್ಯ ಮತ್ತು ಸಂಕ್ಷಿಪ್ತತೆ ಅತ್ಯಂತ ಮುಖ್ಯವಾದ ಗುಣಗಳು. ವಲ್ಲಿ ವಗ್ಗ ಅವರ ಕಥೆಗಳಲ್ಲಿ ಈ ಗುಣಗಳು ಸ್ಪಷ್ಟವಾಗಿ ಕಾಣಿಸುತ್ತವೆ” ಎಂದು ಮೆಲ್ವಿನ್ ರೊಡ್ರಿಗಸ್ ಹೇಳಿದರು.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್.ಎಂ. ಪೆರ್ನಾಲ್ ಅವರು ಕೃತಿಯನ್ನು ಪರಿಚಯಿಸಿ ಮಾತನಾಡಿದರು. 1964ರಲ್ಲಿ ಸಾಹಿತ್ಯ ರಚನೆ ಆರಂಭಿಸಿದ ವಲ್ಲಿ ವಗ್ಗ ಕನ್ನಡದಲ್ಲಿಯೂ ಸಾಕಷ್ಟು ಕಥೆಗಳನ್ನು ಬರೆದಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಥೆಗಾರರಾಗಿದ್ದಾರೆ. ಸಮಾಜದಲ್ಲಿ ದುರ್ಲಕ್ಷ್ಯಕ್ಕೊಳಗಾದ ವರ್ಗಗಳ ಪರವಾಗಿ ನಿಲ್ಲುವುದು ಹಾಗೂ ಜೀವಪರತೆಯನ್ನು ಸಾರುವುದು ಅವರ ಕಥೆಗಳ ಪ್ರಮುಖ ಗುಣವೆಂದು ಅವರು ಹೇಳಿದರು.

1996, 2006 ಹಾಗೂ 2026ರಲ್ಲಿ ರಚಿತವಾದ ತಲಾ ಒಂದೊಂದು ಕಥೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಎಚ್.ಎಂ. ಪೆರ್ನಾಲ್, ವಲ್ಲಿ ವಗ್ಗ ಅವರ ಕಥೆಗಳು ಕಾಲಾತೀತ ಮೌಲ್ಯಗಳನ್ನು ಸಾರುವಲ್ಲಿ ಯಶಸ್ವಿಯಾಗಿವೆ ಎಂದು ಅಭಿಪ್ರಾಯಪಟ್ಟರು.


