Breaking
16 May 2026, Sat

ಹಾಸನದಲ್ಲಿ ಹೊತ್ತಿ ಉರಿದ ಖಾಸಗಿ ಬಸ್; ಪವಾಡದಂತೆ ಪಾರಾದ 36 ಮಂದಿ ಪ್ರಯಾಣಿಕರು

ಹಾಸನ: ರಾಜ್ಯದಲ್ಲಿ ಮತ್ತೆ ಬಸ್ ಬೆಂಕಿ ಅವಘಡ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ಶುಕ್ರವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಭಸ್ಮವಾಗಿದೆ.

ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಬಸ್‌ನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಟೈರ್ ಸ್ಫೋಟವಾದ ತಕ್ಷಣ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬಸ್‌ನ ಸಂಪೂರ್ಣ ಭಾಗಕ್ಕೆ ವ್ಯಾಪಿಸಿದೆ.

ಆದರೆ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ತಕ್ಷಣ ಬಸ್ ನಿಲ್ಲಿಸಿ ಒಳಗಿದ್ದ 36 ಮಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಪರಿಣಾಮ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬೆಂಕಿ ತೀವ್ರವಾಗಿದ್ದರಿಂದ ಪ್ರಯಾಣಿಕರ ಬ್ಯಾಗ್‌ಗಳು, ಮೊಬೈಲ್‌ಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಅವಘಡದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Leave a Reply

Your email address will not be published. Required fields are marked *