Breaking
5 Sep 2026, Sat

ಮಣಿಪಾಲದಲ್ಲಿ ಯುವತಿಗೆ ಸಿಮೆಂಟ್ ಕಲ್ಲಿನಿಂದ ಹಲ್ಲೆ; ಚಿನ್ನದ ಸರ ದೋಚಿ ಪರಾರಿ

ಮಣಿಪಾಲ: ಯುವತಿ ವಾಸಿಸುತ್ತಿದ್ದ ಬಾಡಿಗೆ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ತಲೆಗೆ ಸಿಮೆಂಟ್ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿ, ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾದ ಘಟನೆ ಅಲೆವೂರು ರಸ್ತೆಯ ಶಾಂತಿನಗರದ ಬಳಿ ನಡೆದಿದೆ.

ಕುಮಟಾ ತಾಲೂಕಿನ ಕೂಜಲಿ ಗ್ರಾಮದ ಮೇಘಾ ಮಂಜುನಾಥ ಗೌಡ (25) ಅವರು ತಮ್ಮ ಸ್ನೇಹಿತೆಯರಾದ ನಾಗರತ್ನಾ, ಗಗನಾ ಮತ್ತು ಯೋಗಿತಾ ಅವರೊಂದಿಗೆ ಶಾಂತಿನಗರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಮೇ 12ರ ಸಂಜೆ ಸ್ನೇಹಿತೆಯರು ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಸಂಸ್ಥೆಯೊಂದಕ್ಕೆ ರಾತ್ರಿ ಪಾಳಿ ಕರ್ತವ್ಯಕ್ಕೆ ತೆರಳಿದ್ದರು. ಮೇ 13ರ ಬೆಳಗ್ಗೆ ಸುಮಾರು 7.15ರ ವೇಳೆಗೆ ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಮನೆಯ ಬಾಗಿಲು ಅರೆ ತೆರೆದ ಸ್ಥಿತಿಯಲ್ಲಿ ಕಂಡುಬಂದಿದೆ.

ಮನೆಯೊಳಗೆ ಪ್ರವೇಶಿಸಿದ ವೇಳೆ ಯೋಗಿತಾ ನೆಲದ ಮೇಲೆ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಆಕೆಯ ತಲೆಗೆ ಸಿಮೆಂಟ್ ಕಲ್ಲಿನಿಂದ ಬಲವಾಗಿ ಹಲ್ಲೆ ನಡೆಸಲಾಗಿತ್ತು. ಅಲ್ಲದೆ, ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಗಾಯಗೊಂಡ ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *