Breaking
30 Sep 2026, Wed

ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪಣಂಬೂರು: ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಸಬಾ ಬೆಂಗ್ರೆ ನಿವಾಸಿ ಚಂದು ಹರೀಶ್ (33) ಎಂದು ಗುರುತಿಸಲಾಗಿದೆ.

ಏಪ್ರಿಲ್ 13ರಂದು ಮಡಿಕೇರಿ ಜಿಲ್ಲೆಯ ಸೋಮವಾರ ಪೇಟೆಯ ಮೂವರು ಸ್ನೇಹಿತರು ಅಜಯ್‌ ಕೆ ಅವರ ಹುಟ್ಟುಹಬ್ಬವನ್ನು ಆಚರಿಸಲು ತನ್ನೀರ್‌ ಬಾವಿ ಬೀಚ್‌ ಗೆ ಬಂದಿದ್ದರು. ಈ ವೇಳೆ ಅವರಿಗೆ ದಾರಿ ತಪ್ಪಿದ್ದರಿಂದ ರಸ್ತೆ ಬದಿಯಲ್ಲಿ ಇದ್ದ ವ್ಯಕ್ತಿಯೊಬ್ಬರನ್ನು ವಿಳಾಸ ಕೇಳಲು ವಾಹನ ನಿಲ್ಲಿಸಿದ್ದಾರೆ.

ಆ ಸಮಯದಲ್ಲಿ ಕಸಬಾ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಸಿನಾನ್ (24) ಝಹೀರ್ ನಿಸಾರ್( 22) ಮತ್ತು ಚಂದ್ರು ಹರೀಶ್ ಎಂಬವರು ದಾರಿ ತೋರಿಸುವುದಾಗಿ ಹೇಳಿ ಕಾರಿನ ಹಿಂಬದಿಯಲ್ಲಿ ಕುಳಿತುಕೊಂಡಿದ್ದಾರೆ.

ಸ್ವಲ್ಪ ದೂರ ಸಾಗಿದ ನಂತರ ಆರೋಪಿಗಳು ಅಜಯ್ ಅವರಿಗೆ ಕಾರು ನಿಲ್ಲಿಸಲು ಹೇಳಿ, ತಮ್ಮ ಬಳಿ ಇದ್ದ ಸ್ಕ್ರೂಡ್ರೈವರಿನಿಂದ ಚುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕಾರಿನ ಮುಂಭಾಗದ ಗಾಜನ್ನು ಸ್ಕ್ರೂಡ್ರೈವರಿನ ಹಿಡಿಯಿಂದ ಗುದ್ದಿ ಹಾನಿಗೊಳಿಸಿದ್ದಾರೆ.

ಬಳಿಕ ಆರೋಪಿಗಳು ಟೈಟಾನ್ ವಾಚ್, ಪಾಸ್ಟ್ ಟ್ರಾಕ್ ವಾಚ್, ಕ್ಯಾಮೆರಾಕ್ಕೆ ಅಳವಡಿಸುವ ಗಿಂಬಲ್, ಪವರ್ ಬ್ಯಾಂಕ್, ರೋಲ್ಡ್ ಗೋಲ್ಡ್ ಬ್ರಾಸ್ಲೈಟ್ ಮತ್ತು 2,000 ರೂ. ಹಣ ಸೇರಿದಂತೆ ಸುಮಾರು 24,500 ರೂ ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿದ್ದಾರೆ.

ಈ ಕುರಿತು ಅಜಯ್‌ ಕೆ ಅವರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿ ಚಂದು ಅವರನ್ನು ಪತ್ತೆಹಚ್ಚಿ ಬಂಧಿಸಿ ಏ. 22 ರಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *