Breaking
26 Apr 2026, Sun

ಮೂಡುಬಿದಿರೆ: ಧರ್ಮನೇಮೋತ್ಸವದ ಭಂಡಾರ ಮೆರವಣಿಗೆ ವೇಳೆ ದುರಂತ; ಸಂಕ ಮುರಿದು ಪಲ್ಲಕ್ಕಿ ಉರುಳಿ ಎಂಟು ಮಂದಿಗೆ ಗಾಯ

ಮೂಡುಬಿದಿರೆ: ತಾಲೂಕಿನ ಪುಚ್ಚಮೊಗರು ಬಾವದಬೈಲು ಎಂಬಲ್ಲಿ ಬುಧವಾರ ನಡೆದ ಧಾರ್ಮಿಕ ಮೆರವಣಿಗೆಯ ವೇಳೆ ಸಂಭವಿಸಿದ ಆಕಸ್ಮಿಕ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕೆ ಭಂಡಾರ ಕೊಂಡೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಸಂಕ ಮುರಿದು ಸಂಭವಿಸಿದ ಅವಘಡ:
ಬಾವದಗುತ್ತುವಿನಿಂದ ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ಸಾಂಪ್ರದಾಯಿಕ ಮೆರವಣಿಗೆ ನಡೆಯುತ್ತಿತ್ತು. ಕೊಂಬು, ಬ್ಯಾಂಡ್ ಸೇರಿದಂತೆ ವಾದ್ಯಗೋಷ್ಠಿಗಳ ಮುಖೇನ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮಕ್ಕೆ ಕೊಂಡೊಯ್ಯಲಾಗುತ್ತಿತ್ತು. ಬಾವದಬೈಲು ಎಂಬಲ್ಲಿನ ಕಾಲು ಸಂಕವನ್ನು (ಬೀಮ್) ಮೆರವಣಿಗೆ ದಾಟುತ್ತಿದ್ದ ಸಂದರ್ಭದಲ್ಲಿ, ಭಾರ ತಾಳಲಾರದೆ ಸಂಕವು ಏಕಾಏಕಿ ಮುರಿದು ಬಿದ್ದಿದೆ.

ಪಲ್ಲಕ್ಕಿಯಡಿ ಸಿಲುಕಿದ ಭಕ್ತರು:
ಸಂಕ ಮುರಿದ ರಭಸಕ್ಕೆ ಪಲ್ಲಕ್ಕಿ ಸಂಪೂರ್ಣವಾಗಿ ಉರುಳಿ ಬಿದ್ದಿದೆ. ಈ ವೇಳೆ ಪಲ್ಲಕ್ಕಿಯಲ್ಲಿದ್ದ ಪವಿತ್ರ ಮೊಗಮೂರ್ತಿಗಳು ಹಾಗೂ ಧಾರ್ಮಿಕ ಪರಿಕರಗಳು ಕೆಳಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಪಲ್ಲಕ್ಕಿ ಹೊತ್ತವರು ಅದರ ಅಡಿಯಲ್ಲೇ ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ ಸುನಿಲ್ ಶೆಟ್ಟಿ ಮುಕಾಲ್ದಿ, ಮಾರೂರು, ಲೋಕೇಶ್ ಭಂಡಾರಿ ಸೇರಿದಂತೆ ಒಟ್ಟು ಎಂಟು ಮಂದಿಗೆ ಗಾಯಗಳಾಗಿವೆ.

ಸ್ಥಳೀಯರ ಸಮಯಪ್ರಜ್ಞೆ:
ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಸ್ಥಳೀಯರು ಹಾಗೂ ಭಕ್ತಾದಿಗಳು ಪಲ್ಲಕ್ಕಿಯಡಿ ಸಿಲುಕಿದ್ದವರನ್ನು ಹೊರಕ್ಕೆ ತೆಗೆದು ರಕ್ಷಣಾ ಕಾರ್ಯ ನಡೆಸಿದರು. ಗಾಯಗೊಂಡವರನ್ನು ತಕ್ಷಣವೇ ವಾಹನಗಳ ಮೂಲಕ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

Leave a Reply

Your email address will not be published. Required fields are marked *