ಚಿಕ್ಕಮಗಳೂರು: ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ ಖಾಸಗಿ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಾ.16ರ ಮುಂಜಾನೆ ಎನ್.ಆರ್. ಪುರ ತಾಲೂಕಿನ ಸಂಗಮೇಶ್ವರ ಪೇಟೆ ಬಳಿ ನಡೆದಿದೆ.

ಬೆಂಗಳೂರಿನಿಂದ ಶೃಂಗೇರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್, ಎದುರಿಗೆ ಬಂದ ವಾಹನಕ್ಕೆ ದಾರಿ ಮಾಡಿಕೊಡಲು ಮುಂದಾಗಿದೆ. ಈ ವೇಳೆ ಬಸ್ ನಿಯಂತ್ರಣ ತಪ್ಪಿ ನೇರವಾಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಮಳೆಯಿಂದಾಗಿ ರಸ್ತೆ ಜಾರುತ್ತಿದ್ದ ಪರಿಣಾಮ ಬಸ್ ನಿಯಂತ್ರಣ ತಪ್ಪಿದೆ.

ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಬಸ್ಸಿನ ಮೇಲೆಯೇ ಮುರಿದು ಬಿದ್ದಿದೆ. ಆದರೆ ಕಂಬ ಬಿದ್ದ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಭಾರೀ ಅಪಾಯದಿಂದ ಪಾರಾಗಿದ್ದಾರೆ.



