ಉಡುಪಿ: ಜಿಲ್ಲೆಯ ಸಾಮಾಜಿಕ ಕಳಕಳಿ ಹಾಗೂ ರಕ್ತದಾನದಂತಹ ಕಾರ್ಯಕ್ರಮಗಳಿಂದ ಮನೆಮಾತಾದ ಸಂಸ್ಥೆ ಕುಂದಾಪುರದ ಜೈ ಕುಂದಾಪ್ರ ಸೇವಾ ಟ್ರಸ್ಟ್ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿದೆ.

ಇದೇ ಬರುವ ಎ.12 ರಂದು ಕೋಟ ಆರಕ್ಷಕ ಠಾಣೆಯ ಮುಂಭಾಗ ಜೈ ಕುಂದಾಪ್ರ ಸಂಭ್ರಮ- 2026 ಎಂಬ ಶೀರ್ಷಿಕೆಯಡಿ ಸಾಮಾಜಿಕ ಕಾಳಜಿಯ ಕಾರ್ಯಕ್ರಮ ನಡೆಯಲಿದ್ದು ಕೋಟದ ಕ್ರಿಯಾಶೀಲ ಸಂಘಟನೆಯಾದ ಪಂಚವರ್ಣ ಸಂಘಟನೆಗೆ ಜೈ ಕುಂದಾಪ್ರ ಸೇವಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಈ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೋಟ ಶ್ರೀಕಾಂತ್ ಶೆಣೈ, ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್, ಧಾರ್ಮಿಕ ಮುಖಂಡ ಕೆ. ಭಾಸ್ಕರ್ ಸ್ವಾಮಿ ವಿಶೇಷ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಜೊತೆಗೆ ಅಶಕ್ತರಿಗೆ ನೆರವು, ವಿಶೇಷ ಚೇತನರಿಗೆ ಕಿಟ್ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಇದರೊಂದಿಗೆ ತ್ರಿನೇತ್ರ ಕಲಾವಿದರು ಕುಡ್ಲ ಅವರಿಂದ ಬ್ರಹ್ಮ ರಕ್ಕಸೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಪ್ರಮುಖರಾದ ಪುಂಡಲಿಕ ಮೊಗವೀರ, ಜಯರಾಜ್ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




