ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ.) ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಆಯೋಜನೆಗೊಂಡ ಮಹಿಳೆಯರಿಗೆ ಉಚಿತ 7 ದಿನಗಳ ಮದುಮಗಳ ಶೃಂಗಾರ ತರಬೇತಿ ಶಿಬಿರಕ್ಕೆ ಮಾರ್ಚ್ 9 ರಂದು ಬಂಟ್ವಾಳ ತಾಲೂಕಿನ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಚಾಲನೆ ನೀಡಲಾಯಿತು.
ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ದಿನೇಶ್ ಅವರು ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮಗಳು ಆರ್ಥಿಕ, ಸಾಮಾಜಿಕ, ಸಬಲೀಕರಣದ ಮೂಲಕ ಮಹಿಳೆಯರು ಮುಖ್ಯ ವಾಹಿನಿಗೆ ಬರಲು ಕಾರಣವಾಗಿದೆ. ಹೀಗಾಗಿ ಏಳು ದಿನದ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ಜ್ಞಾನವಿಕಾಸ ಯೋಜನಾಧಿಕಾರಿಯಾದ ಮಲ್ಲಿಕಾ ಶಿಬಿರದ ಬಗ್ಗೆ ಪ್ರಾಸ್ತವಿಕ ನುಡಿಗಳನ್ನಾಡಿದರು.
ಈ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಜನಜಾಗೃತಿ ಸದಸ್ಯರಾದ ಭಾರತೀ ಚೌಟ, ಸದಾನಂದ ಗೌಡ ನಾವೂರ್, ತರಬೇತಿ ಶಿಕ್ಷಕಿಯಾದ ಶೋಭಾ ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು .








