Breaking
9 Mar 2026, Mon

ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಆಗುತ್ತಿರುವ ಕೈಕಂಬ ಸೇತುವೆ

ಬೆಳ್ತಂಗಡಿ: ಜನರು ವಿದ್ಯಾವಂತರು, ಬುದ್ದಿವಂತರು ಆದಷ್ಟು ನಾಗರಿಕ ಸಮಾಜದಲ್ಲಿ ಅನಾಗರಿಕರಂತೆ ವರ್ತನೆ ಹೆಚ್ಚುತ್ತಿದೆ ಎಂಬುದಕ್ಕೆ ಉತ್ತಮ ಉದಾಹರಣೆ ನಾವೂರು ಗ್ರಾಮದ ಕೈಕಂಬ ಸೇತುವೆ. ದಿನನಿತ್ಯ ಬಳಕೆಯ ತ್ಯಾಜ್ಯಗಳನ್ನು ತಂದು ಸೇತುವೆ ಕೆಳಗೆ ಹರಿಯುವ ನದಿ ನೀರಿಗೆ ಸುರಿಯುವುದು ಇಲ್ಲಿ ಮಾಮೂಲು ಆಗಿದೆ.

ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮದಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ , ಹಾಳೆ ತಟ್ಟೆಗಳು , ಪ್ಲಾಸ್ಟಿಕ್ ಚೀಲಗಳು , ಬಾಟಲ್ ಗಳು , ಲೋಟಗಳು , ಬಿಯರ್ ಬಾಟಲ್ ಗಳು , ಮಹಿಳೆಯರು ಬಳಸುವ ಪ್ಯಾಡ್ , ಮಕ್ಕಳು ಮತ್ತು ಹಾಸಿಗೆ ಹಿಡಿದಿರುವವರ ಪ್ಯಾಂಪರ್ಸ್ ಸೇರಿದಂತೆ ಸೆಲೂನ್ ಗಳಲ್ಲಿ ಕತ್ತರಿಸಿದ ತಲೆಗೂದಲನ್ನು ಗೋಣಿಯಲ್ಲಿ ತಂದು ಇಲ್ಲಿ ಸುರಿಯುತ್ತಾರೆ. ಒಟ್ಟಾರೆಯಾಗಿ ಕೈಕಂಬ ಸೇತುವೆಯ ನದಿ ತೀರ ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಳ್ಳುತ್ತಿದೆಯೇ ಎಂಬ ಸಂಶಯ ಉಂಟಾಗುವಂತಿದೆ.

ಸ್ವಚ್ಛ ಭಾರತ ಸೇರಿದಂತೆ ಹತ್ತಾರು ಕಾನೂನು , ಯೋಜನೆಗಳು ಜಾರಿಯಲ್ಲಿದ್ದರೂ ಗಾಂಧಿ ಜಯಂತಿಯಂದು ಮಾತ್ರ ಒಂದು ದಿನಕ್ಕೆ ಸ್ವಚ್ಚತಾ ಕಾರ್ಯ ಸೀಮಿತವಾಗಿದೆ. ಗ್ರಾಮ ಪಂಚಾಯತ್ ಗಳು ಸ್ವಚ್ಚತೆಗಾಗಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ನಮ್ಮ ವಿದ್ಯಾವಂತ, ಬುದ್ದಿವಂತ ಜನರು ಮಾತ್ರ ತ್ಯಾಜ್ಯಗಳನ್ನು ನದಿ, ಸೇತುವೆ, ರಸ್ತೆ ಬದಿಯಲ್ಲಿ ಎಸೆಯುತ್ತಾ ಸ್ವಚ್ಛತೆಗೆ ಸವಾಲು ಹಾಕುವ ನೀಚತನ ಪ್ರದರ್ಶಿಸುತ್ತಾರೆ. ಗ್ರಾಮ ಪಂಚಾಯತ್ ಗಳು ಕಸ ಬಿಸಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಮಾತ್ರ ಸ್ವಚ್ಛ ಭಾರತ ಪರಿಕಲ್ಪನೆ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಸಾಧ್ಯ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *