Breaking
22 Sep 2026, Tue

ಕಾಡಬೆಟ್ಟು–ಮದ್ವ–ಕಾವಳಪಡೂರು ಒಕ್ಕೂಟದ ಪದಗ್ರಹಣ ಸಮಾರಂಭ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಪಡೂರು, ಕಾಡಬೆಟ್ಟು ಹಾಗೂ ಮದ್ವ ಕಾರ್ಯಕ್ಷೇತ್ರದ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ.20ರಂದು ವಗ್ಗದ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು.


ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ರೋಟೇರಿಯನ್ ಪ್ರಕಾಶ್ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿವೆ. ಸರ್ಕಾರಗಳು ಮಾಡಬೇಕಾದ ಹಲವು ಕಾರ್ಯಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಾರ್ಯರೂಪಕ್ಕೆ ತಂದು, ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ ಎಂದರು.


ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಅವುಗಳ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಗ್ರಾಮೀಣ ಭಾಗದ ಜನರು ಸ್ವಾವಲಂಬಿ ಜೀವನ ನಡೆಸಲು ಯೋಜನೆಯ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.


ಉದ್ಯಮಿಗಳಾದ ಶೃತಾಂಜನ್ ಜೈನ್, ಮಾಣಿಕ್ಯ ರಾಜ್ ಜೈನ್, ಸುಜಿತ್ ಕುಮಾರ್ ಜೈನ್, ಪ್ರಮೋದ್ ಕುಮಾರ್ ರೈ, ಶಿವಪ್ಪಗೌಡ, ಭೂಬಸಪಲ್ಯ ಸುರೇಶ್ ಉರುಡಾಯಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲೂಕು ಮಾಸ್ಟರ್ ಪ್ರವೀಣ್ ಕಾಡಬೆಟ್ಟು, ವಗ್ಗ ವಲಯ ಮೇಲ್ವಿಚಾರಕ ಸುರೇಶ್, ವಲಯ ಅಧ್ಯಕ್ಷ ಉಮೇಶ್, ಮೂರು ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೂ ಮುನ್ನ ಶ್ರೀ ಗಾಯತ್ರಿದೇವಿ ಭಜನಾ ಮಂಡಳಿಯವರಿಂದ ಕುಣಿತ ಭಜನಾ ಕಾರ್ಯಕ್ರಮ ಹಾಗೂ ಶ್ರೀರಾಮ ಬಾಲ ಗೋಕುಲ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಸಂಘದ ಹಿರಿಯ ಸದಸ್ಯರಾದ ಶಾಂತ ಶೆಟ್ಟಿ ಕಾಡಬೆಟ್ಟು, ವಸಂತ್ ಪೂಜಾರಿ ಕಾವಳಪಡೂರು ಹಾಗೂ ಶ್ರೀಮತಿ ಸೀತಾ ಮದ್ವ, ಮೆಸ್ಕಾಂ ಕಾರ್ಯಕರ್ತರಾದ ನವೀನ್, ಮುಸ್ತಫಾ, ರುದ್ರೇಶ್, ಶೌರ್ಯ ತಂಡದ ತಾಲೂಕು ಮಾಸ್ಟರ್ ಪ್ರವೀಣ್, ಘಟಕ ಪ್ರತಿನಿಧಿ ಸಂಪತ್ ಶೆಟ್ಟಿ ಸೇರಿದಂತೆ ಸದಸ್ಯರನ್ನು ಗೌರವಿಸಲಾಯಿತು.


ಸಂಘದ ಸದಸ್ಯರ ಮಕ್ಕಳಿಗೆ ಮಂಜೂರಾದ ಸುಜ್ಞಾನ ನಿಧಿ ಪತ್ರಗಳನ್ನು ವಿತರಿಸಲಾಯಿತು. ಇದೇ ವೇಳೆ ಮೂರು ಉತ್ತಮ ಸಂಘಗಳನ್ನು ಅಭಿನಂದಿಸಲಾಯಿತು.
ದೃವಿ ಪಿ. ಕುಂದರ್ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ಸುರೇಶ್ ಸ್ವಾಗತಿಸಿದರು. ಒಕ್ಕೂಟಗಳ ವರದಿಯನ್ನು ರೇಖಾ ಪಿ. ವಾಚಿಸಿದರು. ಸುಮಿತ್ರ ವಂದಿಸಿದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *