Breaking
9 Mar 2026, Mon

ಕೊಲೆ, ದರೋಡೆ ಸೇರಿದಂತೆ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದು 9 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು: ಕೊಲೆ, ಕಳ್ಳತನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್‌ನ ಸಹಚರನನ್ನು ಮಂಗಳೂರು ನಗರ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಳ್ಳಾರಿ ಮೂಲದವನಾಗಿದ್ದು ಪ್ರಸ್ತುತ ಬೆಂಗಳೂರಿನ ಶ್ಯಾಮ್ ಪುರದ ಬೇಕರಿ ಸಮೀಪ ವಾಸವಾಗಿದ್ದ ಸೂಫೀಯಾನ್ ಹುಸೇನ್ ಅಲಿಯಾಸ್ ಕೊಟ್ರೇಶಿ (31) ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ವಾಸವಿದ್ದ ಈತ ಹೆಸರನ್ನು ‘ಹುಸೇನ್’ ಎಂದು ಬದಲಾಯಿಸಿಕೊಂಡಿದ್ದು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿಯಂತಹ ಅಧಿಕೃತ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ಅಲ್ಲದೇ ಸ್ಥಳೀಯ ಮಹಿಳೆಯೊಬ್ಬರನ್ನು ಮದುವೆಯಾಗಿ ಹೊಸ ಗುರುತಿನೊಂದಿಗೆ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ವೃದ್ಧೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಳವು ಮಾಡಿ ಆಕೆಯನ್ನು ಕೊಲೆಗೈದ ಪ್ರಕರಣದಲ್ಲಿ ಈತ ಈ ಹಿಂದೆ ಜೈಲು ಪಾಲಾಗಿದ್ದನು. ಈತನ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿಯ ಆಧಾರದ ಮೇಲೆ ಬೆಂಗಳೂರಿನ ಡಿ.ಜೆ. ಹಳ್ಳಿಯ ರೈಲ್ವೆ ಗೇಟ್ ಬಳಿಯ ಶಾಮ್ ಪುರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಕುಖ್ಯಾತ ರೌಡಿಶೀಟರ್ ಸಫ್ವಾನ್ ಹುಸೈನ್ ಗ್ಯಾಂಗ್ ಸೇರಿಕೊಂಡಿದ್ದ ಎನ್ನಲಾಗಿದೆ.

ಆರೋಪಿಯ ವಿರುದ್ಧ ಸುರತ್ಕಲ್, ಬಜ್ಪೆ, ಬಳ್ಳಾರಿ ಮತ್ತು ಹೊಸಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ.

Leave a Reply

Your email address will not be published. Required fields are marked *