Breaking
27 Feb 2026, Fri

ಗಂಗೊಳ್ಳಿ ಮಧ್ಯ ಸಮುದ್ರದಲ್ಲಿ ಬೋಟ್ ಮುಳುಗಡೆ: ಐವರು ಮೀನುಗಾರರು ರಕ್ಷಣೆ

ಕುಂದಾಪುರ: ಗಂಗೊಳ್ಳಿ ಮಧ್ಯದ ಸಮುದ್ರದಲ್ಲಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ನೀರು ತುಂಬಿ ಮುಳುಗಿದ ಘಟನೆ ನಡೆದಿದ್ದು ಐವರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬೋಟಿನಲ್ಲಿದ್ದ ಮೀನುಗಾರರಾದ ಕುಮಟಾ ಮೂಲದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಹಾಗೂ ಶ್ರೀನಿವಾಸ ಅವರನ್ನು ರಕ್ಷಿಸಲಾಗಿದೆ.

ಫೆ. 23 ರಂದು ಕೆಮ್ಮಣ್ಣಿನ ನಾಗರಾಜ್ ಪುತ್ರನ್ ಅವರ ‘ಶ್ರೀದುರ್ಗಾಪರಮೇಶ್ವರಿ’ ಬೋಟ್ ಮಲ್ಪೆ ಬಂದರಿನಿಂದ ರಾತ್ರಿ ಮೀನುಗಾರಿಕೆಗೆ ಹೊರಟಿತ್ತು. ಫೆ. 24ರಂದು ಗಂಗೊಳ್ಳಿ ಮಧ್ಯ ಸಮುದ್ರದಲ್ಲಿ ಬೋಟ್‌ನ ಅಡಿಭಾಗಕ್ಕೆ ಯಾವುದೋ ವಸ್ತು ತಾಗಿದ ಪರಿಣಾಮ ಎಂಜಿನ್ ಭಾಗದ ಮೂಲಕ ನೀರು ಒಳನುಗ್ಗಲು ಆರಂಭವಾಯಿತು. ನೀರು ಹೆಚ್ಚಾಗಿ ತುಂಬಿ ಎಂಜಿನ್ ಸ್ಥಗಿತಗೊಂಡಿತು. ತಕ್ಷಣ ಬೋಟ್‌ನಲ್ಲಿದ್ದವರು ನೀರು ಹೊರಹಾಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಬಳಿಕ ಸಹಾಯಕ್ಕಾಗಿ ಮಲ್ಪೆ ಬಂದರಿನಿಂದ ‘ಶ್ರೀಕೃಷ್ಣ’ ಬೋಟ್ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೀನುಗಾರರನ್ನು ರಕ್ಷಿಸಿದರು.

ಬಳಿಕ ‘ಶ್ರೀಕೃಷ್ಣ’ ಬೋಟ್‌ನವರು ಹಗ್ಗ ಕಟ್ಟಿ ದುರಂತಕ್ಕೀಡಾದ ಬೋಟ್ ಅನ್ನು ಗಂಗೊಳ್ಳಿ ಬಂದರಿನತ್ತ ಎಳೆದುಕೊಂಡು ಬರುತ್ತಿದ್ದರು. ಗಂಗೊಳ್ಳಿ ಬಂದರಿನಿಂದ ಸುಮಾರು 8–9 ನಾಟಿಕಲ್ ಮೈಲು ದೂರದಲ್ಲಿ ಗಾಳಿ ಮತ್ತು ಅಲೆಗಳ ಅಬ್ಬರದಿಂದ ಹಗ್ಗ ತುಂಡಾಗಿ, ಬೋಟ್ ಸಂಪೂರ್ಣ ಮುಳುಗಿತು.

ಈ ಘಟನೆಯಿಂದ ಅಂದಾಜು 60–65 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ ಎಂದು ಬೋಟ್ ಮಾಲಕ ನಾಗರಾಜ್ ಪುತ್ರನ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *