ಮಂಗಳೂರು: ಹೊರವಲಯ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕು ನಿವಾಸಿ ಸದ್ಯ ಮಂಗಳೂರು ಬಿಜೈಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಶಿವದಾಸ್ ಗಣಪತಿ ನಾಯ್ಕ ಎಂದು ಗುರುತಿಸಲಾಗಿದೆ.

ಶಿವದಾಸ್ ಗಣಪತಿ ನಾಯ್ಕ ಅವರು ಕೆಲಸ ಮುಗಿಸಿಕೊಂಡು ಬಿಜೈಯಲ್ಲಿರುವ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಢಿಕ್ಕಿಯ ರಭಸಕ್ಕೆ ಅವರು ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ಧಾರೆ.






