Breaking
27 Feb 2026, Fri

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದರ್ಶನ ಸಮಾನತೆಯ ಸಮಾಜಕ್ಕೆ ಮುನ್ನುಡಿ: ಮಧುಸೂದನ್ ಸುವರ್ಣ

ಬಂಟ್ವಾಳ: ನರಿಕೊಂಬು ಮೊಗರ್ನಾಡು ವಿವೇಕಪುರದ ರಂಜಿತ್ ಪೂಜಾರಿ ಅವರ ‘ಬೃಂದಾವನ’ ನಿವಾಸದಲ್ಲಿ ‘ಗುರುತತ್ವವಾಹಿನಿ ಭಜನಾ ಸಂಕೀರ್ತನೆ-68’ ಕಾರ್ಯಕ್ರಮವು ಫೆ. 26ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಮಾತನಾಡಿದ ಶಿಕ್ಷಕ ಮಧುಸೂದನ್ ಸುವರ್ಣ ಅವರು “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ” ಎಂಬ ಮಂತ್ರದೊಂದಿಗೆ ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಮಾನವ ಕುಲದ ಸಂಘಟನೆಯೇ ಬಲಿಷ್ಠ ಸಮಾಜದ ಅಡಿಪಾಯವೆಂದು ಸಾರಿದರು ಎಂದು ತಿಳಿಸಿದರು.

ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಸಮಾನತೆ ಮತ್ತು ಶೈಕ್ಷಣಿಕ ಪ್ರಗತಿಯ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆ ತಂದ ಗುರುಗಳು, “ಜಾತಿ ಒಂದೇ, ಮತ ಒಂದೇ, ದೇವರು ಒಬ್ಬನೇ” ಎಂಬ ಮಾನವತಾವಾದದ ಮೂಲಕ ಕ್ರಾಂತಿ ಮಾಡಿದರು. ಅಸ್ಪೃಶ್ಯತೆ ಮತ್ತು ಅಂಧಶ್ರದ್ಧೆಗಳನ್ನು ತೊಡೆದುಹಾಕಲು ಅವರು ನಡೆಸಿದ ಈ ತ್ರಿವಿಧ ಕ್ರಾಂತಿಯು ಇಂದಿಗೂ ಮನುಕುಲದ ಏಳಿಗೆಗೆ ದಾರಿದೀಪವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ಕಾರ್ಯದರ್ಶಿ ಮಧುಸೂದನ್ ಮದ್ವ l ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ಹಾಗೂ ಸಲಹೆಗಾರರಾದ ರಾಮಚಂದ್ರ ಸುವರ್ಣ ತುಂಬೆ, ಮಾಜಿ ಅಧ್ಯಕ್ಷರು ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ರಂಜಿತ್ ಪೂಜಾರಿ ದಂಪತಿಗಳು ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ಅರ್ಪಿಸಿದರು. ಸಮಾಜ ಸೇವಾ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *