ಮಂಗಳೂರು: ಜನರನ್ನು ಬಹುಬೇಗ ಆಕರ್ಷಿಸುವ ಸಿನಿಮಾವು ಮನರಂಜನೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವಂತಾಗಬೇಕು, ಕೊಂಕಣಿ ಭಾಷಾ ಸಿನಿಮಾಕ್ಕೆ ಉತ್ತಮ ಭವಿಷ್ಯವಿದೆ. ತಂತ್ರಜ್ಞರು, ಕಲಾವಿದರು ಜೊತೆಯಾಗಿ ಉತ್ತಮ ಸಿನಿಮಾವನ್ನು ನಿರ್ಮಿಸಿದಲ್ಲಿ ಪ್ರೇಕ್ಷಕರು ಸಹ ಅವರಿಗೆ ಮುಕ್ತ ಬೆಂಬಲ ನೀಡುತ್ತಾರೆ. “ವೇಳ್‌ಘಡಿ” ಕೊಂಕಣಿ ಸಿನಿಮಾವು ಉತ್ತಮವಾಗಿ ಮೂಡಿಬರಲಿ ಎಂದು ದಾಮಸ್‌ಕಟ್ಟೆಯ ಕಿರೆಂ ಚರ್ಚ್‌ನ ಧರ್ಮಗುರು ಫಾ. ಒಸ್ವಾಲ್ಡ್ ಮೊಂತೇರೋ ಹೇಳಿದರು.

ಅವರು ಕಿನ್ನಿಗೋಳಿ ಬಳಿಯ ದಾಮಸ್‌ಕಟ್ಟೆಯ ಕಿರೆಂ ಚರ್ಚ್‌ನ ಶಾಲೋಮ್ ಹಾಲ್‌ನ ಕಿರು ಸಭಾಂಗಣದಲ್ಲಿ ರೋಶನ್ ನೆಲ್ಲಿಗುಡ್ಡೆ ಅವರ ಸೋನುಲವಿ ಸಿನೆ ಕ್ರಿಯೇಶನ್ಸ್‌ನ ಬ್ಯಾನರ್ ಅಡಿಯಲ್ಲಿ, ಜಾನ್ ವಿಲ್ಸನ್ ಲೋಬೋ ಅವರ ನಿರ್ಮಾಣದ ನೋರ್ಬಾರ್ಟ್ ಜಾನ್ ನಿರ್ದೇಶನದ “ವೇಳ್‌ಘಡಿ” ಕೊಂಕಣಿ ಸಿನಿರ್ಮಾಣದ ಮುಹೂರ್ತವನ್ನು ನೆರವೇರಿಸಿ ಆಶೀರ್ವಚನ ನೀಡಿದರು.

ಚಿತ್ರ ನಿರ್ಮಾಪಕ ಜಾನ್ ವಿಲ್ಸನ್ ಲೋಬೋ ಮಾತನಾಡಿ, ಕೊಂಕಣಿ ಸಿನಿಮಾವೊಂದನ್ನು ನಿರ್ಮಿಸಬೇಕು ಎಂಬ ಕನಸು ಈಗ ಈಡೇರುತ್ತಿದೆ. ಒಂದು ಉತ್ತಮ ಕಥೆಯುಳ್ಳ, ಸಮಾಜದ ಯುವ ಪೀಳಿಗೆಗೆ ಜಾಗೃತಿ ಸಂದೇಶವನ್ನು ನೀಡುವ ಸಿನಿಮಾವಾಗಿ ನಿರ್ಮಾಣವಾಗಲಿದೆ, ಎಲ್ಲರ ಪ್ರೋತ್ಸಾಹ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಮುಂಬೈ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮಾತನಾಡಿ, ಸಮಾಜವು ಬದಲಾವಣೆಯಾಗಲು ಸಿನಿಮಾ ಕ್ಷೇತ್ರ ಬಹಳಷ್ಟು ಕೊಡುಗೆಯನ್ನು ನೀಡಿದೆ. ಪ್ರಾದೇಶಿಕ ಭಾಷೆಯಾದ ಕೊಂಕಣಿಯ ಪ್ರೇಕ್ಷಕರು ವಿಶ್ವಮಟ್ಟದಲ್ಲಿದ್ದು, ಎಲ್ಲರೂ ಈ ಸಿನಿಮಾವನ್ನು ನೋಡುವಂತಹ ವಾತಾವರಣ ನಿರ್ಮಾಣವಾಗಲಿ ಎಂದರು.

ಸೋನುಲವಿ ಸಿನೆ ಕ್ರಿಯೇಶನ್ಸ್‌ನ ಪ್ರವರ್ತಕ ರೋಶನ್ ನೆಲ್ಲಿಗುಡ್ಡೆ ಸಿನಿಮಾ ಹಾಗೂ ಅದರ ತಂತ್ರಜ್ಞನರ, ಕಲಾವಿದರ ಪರಿಚಯಿಸಿ, ಸ್ವಾಗತಿಸಿದರು. ಮಂಗಳೂರಿನ ಹಿರಿಯ ಕಲಾವಿದ ಡೊಲ್ಲಂ, ಎಂಸಿಸಿ ಬ್ಯಾಂಕ್‌ನ ನಿರ್ದೇಶಕ ಹಾಗೂ ನ್ಯಾಯವಾದಿ ಜೆ.ಬಿ. ಮೋಂತೆರೋ, ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಹನ್ ಡಿ.ಕೋಸ್ತ ಶುಭ ಹಾರೈಸಿದರು.

ಸಿನಿಮಾ ನಿರ್ದೇಶಕ ನೋರ್ಬಾರ್ಟ್ ಜಾನ್, ಪ್ರೋಡಕ್ಷನ್ ಇಂಜಿನಿಯರ್ ಆಲ್ವಿನ್ ಸಿಕ್ವೇರಾ, ಡಿಒಪಿ ಫೆಸ್‌ವಿತ್ ಮಂಗಳೂರು, ಸಹಾಯಕ ರಾಯನ್, ಸಿನಿಮಾ ಪಿಆರ್‌ಒ ಸುನಿಲ್ ನೆಲ್ಲಿಗುಡ್ಡೆ, ಕಲಾವಿದರು ಮತ್ತಿತರರು ಉಪಸ್ಥಿತರಿದ್ದರು. ಸೆನೆಟ್ ಡಿಕೋನ್ಹ ಕಾರ್ಯಕ್ರಮ ನಿರೂಪಿಸಿದರು.

ವೇಳ್‌ಘಡಿ” ಕೊಂಕಣಿ ಸಿನಿಮಾ ಸಮಾಜದಲ್ಲಿ ಒಂದು ಘಟನೆ ಕ್ಷಣಿಕವಾಗಿ ನಡೆದಾಗ ಅದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ರೋಷಕ ಕಥೆಯ ಎಳೆಯೊಂದಿಗೆ ನಡೆಯುವ ತಾಕಲಾಟದ ಚಿತ್ರಣವೇ “ವೇಳ್‌ಘಡಿ” ಕೊಂಕಣಿ ಸಿನಿಮಾದ ಕಥಾ ಸಾರಾಂಶವನ್ನು ರೋಶನ್ ನೆಲ್ಲಿಗುಡ್ಡೆ ಅವರು ರಚಿಸಿದ್ದು, ಸಹ ನಿರ್ದೇಶನ ಹಾಗೂ ತಮ್ಮದೇ ಸೋನುಲವಿ ಸಿನೆ ಕ್ರಿಯೇಶನ್ಸ್‌ನ ಮೂಲಕ ತೆರೆಗೆ ತರಲಿದ್ದಾರೆ. ನಿರ್ಮಾಣದಲ್ಲಿ ಜಾನ್ ವಿಲ್ಸನ್ ಲೋಬೋ ಸಹಕಾರ ನೀಡಲಿದ್ದಾರೆ. ಸಿನಿಮಾ ಕ್ಷೇತ್ರದ ತಂತ್ರಜ್ಞರಾಗಿ ಸಾಕಷ್ಟು ಅನುಭವ ಇರುವ ನೋರ್ಬಾರ್ಟ್ ಜಾನ್ ನಿರ್ದೇಶನದ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ. ಯುವ ಸಂಗೀತಗಾರ ರಸ್ಸೆಲ್ ರೋಡ್ರಿಗಸ್ ಸಂಗೀತ ನೀಡಲಿದ್ದಾರೆ. ಪ್ರೋಡಕ್ಷನ್ ಇಂಜಿನಿಯರ್ ಆಗಿ ಆಲ್ವಿನ್ ಸಿಕ್ವೇರಾ, ಡಿಒಪಿಯಲ್ಲಿ ಫೆಸ್‌ವಿತ್ ಮಂಗಳೂರು ಸಹಾಯಕರಾಗಿ ರಾಯನ್, ಸಾಹಿತಿ ವಿಲ್ಸನ್ ಕಟೀಲು ಮತ್ತು ವಿಲ್ಫ್ರೇಡ್ ಪಾಂಗಳ ಸಿನಿಮಾ ತಂಡದಲ್ಲಿದ್ದು, ಸುನಿಲ್ ನೆಲ್ಲಿಗುಡ್ಡೆ ಪಿಆರ್‌ಒ ಆಗಿದ್ದಾರೆ. ಕಲಾವಿದರಾಗಿ ಹೊಸ ಮುಖಗಳೊಂದಿಗೆ ಅನುಭವಿ ಕಲಾವಿದರಿದ್ದಾರೆ. ಕಿನ್ನಿಗೋಳಿ, ಮಂಗಳೂರು, ಬಜಪೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ.



