ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಟೋಲ್ ಗೇಟ್‌ಗಳನ್ನು ತೆರೆಯಲು ಸಿದ್ಧತೆಗಳು ಬಿರುಸುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿ.ಸಿ.ರೋಡ್‌ನಲ್ಲಿ ಬಂಟ್ವಾಳ ತಾಲೂಕಿನ ಸಮಾನ ಮನಸ್ಕ ಸಂಘಟನೆಗಳು ಹಾಗೂ ಟೋಲ್ ವಿರೋಧಿ ಹೋರಾಟಗಾರರು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಸಂಬಂಧಿಸಿದಂತೆ ಸಮಾಲೋಚನಾ ಸಭೆ ನಡೆಸಿದರು.

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನೂತನ ಸಮಿತಿ ವತಿಯಿಂದ ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾ. 3 ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪದಲ್ಲಿ ಬೃಹತ್ ಸಾಮೂಹಿಕ ಧರಣಿ ನಡೆಸುವುದಾಗಿ ಸಭೆ ತೀರ್ಮಾನಿಸಲಾಯಿತು.

ಮುಂದಿನ ಹಂತದಲ್ಲಿ ಮತ್ತಷ್ಟು ತೀವ್ರತರವಾದ ಹೋರಾಟ ಸಂಘಟಿಸುವುದು, ಟೋಲ್ ಗೇಟ್ ತೆರವು ಗೊಳಿಸಿಯೇ ವಿಶ್ರಮಿಸುವುದು ಎಂದು ಸಭೆ ಘೋಷಿಸಿತು.

ಮಾಜಿ ಸಚಿವ ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾನ ಮನಸ್ಕ ವಿವಿಧ ಸಂಘಟನೆಗಳು, ಪಕ್ಷಗಳಿಗೆ ಸೇರಿದ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಟೋಲ್ ಗೇಟ್ ತೆರವಿಗೆ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ಮಾರ್ಗದರ್ಶನ ಮಾಡಿದರು.

ಸಭೆಯ ಕೊನೆಯಲ್ಲಿ “ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ, ಬಂಟ್ವಾಳ” ರಚಿಸಲು, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಅವಿರತ ಹೋರಾಟ ನಡೆಸಲು ಸಭೆ ನಿರ್ಧರಿಸಲಾಯಿತು.
ಹೋರಾಟ ಸಮಿತಿಗೆ ಬಿ ರಮಾನಾಥ ರೈ ಅವರನ್ನು ಗೌರವಾಧ್ಯಕ್ಷರಾಗಿ, ಬಿ ಶೇಖರ್ ಹಾಗು ಮೋಹನ್ ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮುಂದಿನ ದಿನದಲ್ಲಿ ಸಮಾನ ಮನಸ್ಕರಾದ ಎಲ್ಲರನ್ನು ಒಳಗೊಂಡ ಸಮಾವೇಶ ನಡೆಸಿ ಪೂರ್ಣಪ್ರಮಾಣದ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ರೈತ, ಕಾರ್ಮಿಕ, ದಲಿತ ಮತ್ತು ವಿವಿಧ ಜನಪರ ಸಂಘಟನೆಗಳ ಪ್ರಮುಖರು, ಸ್ಥಳೀಯ ಜನಪ್ರತಿ ನಿಧಿಗಳು, ಸಮಾನ ಮನಸ್ಕ ಸಂಘಟನೆಗಳ ಸಮಾನ್ವಯ ಸಮಿತಿ ಬಂಟ್ವಾಳದ ಪ್ರಮುಖರು ಉಪಸ್ಥಿತರಿದ್ದರು. ಮುಂದಿನ ಚಳುವಳಿಯಲ್ಲಿ ಇನ್ನಷ್ಟು ಅಪಾರ ಸಂಖ್ಯೆಯ ಸಂಘಟನೆಗಳು ಬೆಂಬಲಿಸಲಿದೆ.




