Breaking
19 Feb 2026, Thu

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಿಸಿಬಿ ಪೊಲೀಸರ ಬಲೆಗೆ

ಮಂಗಳೂರು: ಕೊಲೆ, ದರೋಡೆ , ಕಳ್ಳತನ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದು ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಳೆಯಂಗಡಿಯ ಕೊಪ್ಪಳ ಹೌಸ್‌ನ ಸಫ್ವಾನ್ ಹುಸೈನ್ (42) ಎಂದು ಗುರುತಿಲಾಗಿದೆ.

ಸಫ್ವಾನ್ ಹುಸೈನ್ ತನ್ನ ಸಹಚರರೊಂದಿಗೆ ಸೇರಿಕೊಂಡು 2017 ರಲ್ಲಿ ಲೆಕ್ಕಿ ಸಹ್ವಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ, ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದನು. ಬಳಿಕ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದನು.

ನಂತರ ಆಂಧ್ರ ಪ್ರದೇಶದ ರಾಯಚೋಟೆ ಪ್ರದೇಶದಲ್ಲಿ ತನ್ನ ಹೆಸರನ್ನು ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಬದಲಿಸಿಕೊಂಡು ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದನು. 2018ರಿಂದ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದನು. ವಿದೇಶಗಳಲ್ಲಿ ಮಂಗಳೂರು ಮೂಲದ ವ್ಯಾಪಾರಸ್ಥರಿಗೆ ಬಲವಂತವಾಗಿ ಹಣ ವಸೂಲಿ ಮಾಡಿದ ಆರೋಪಗಳೂ ದಾಖಲಾಗಿತ್ತು. ಬಳಿಕ ಆರೋಪಿ ಸಪ್ತಾನ್ ಹುಸೈನ್ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಅಂದ್ರಪ್ರದೇಶ ರಾಯಚೋಟೆಯಿಂದ ಬಂಧಿಸಿದ್ದಾರೆ.

ಆರೋಪಿಯು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕೊಲೆ, 4 ಕೊಲೆಯತ್ನ, ಗ್ಯಾಂಗ್ ರೇಪ್, 5 ದರೋಡೆ, ಅಪಹರಣ, ಸುಲಿಗೆ, ಕಳ್ಳತನ, ಜೈಲಿನಲ್ಲಿ ಸಹ ಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಮುಂತಾದ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 31 ಪ್ರಕರಣಗಳಲ್ಲಿ ಭಾಗಿಯಾಗಿಯಾಗಿರುತ್ತಾನೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *