Breaking
18 Feb 2026, Wed

ಶಿಶು ಮಂದಿರದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಭಾರತ್ ಮಾತಾ ಪೂಜ ಕಾರ್ಯಕ್ರಮ ಮತ್ತು ಮಾತೃ ಪಾದಪೂಜೆ, ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಬೆಳ್ತಂಗಡಿ : ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ ) ಅಲೆಕ್ಕಿ – ಮುಗೇರಡ್ಕ ಮೊಗ್ರುವಿನ ಶ್ರೀ ರಾಮ ಶಿಶು ಮಂದಿರದ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಭಾರತ್ ಮಾತಾ ಪೂಜ ಕಾರ್ಯಕ್ರಮ , ಮಾತೃ ಪಾದಪೂಜೆ, ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಫೆ. 13 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಶಿಶು ಮಂದಿರದ ಚಿಣ್ಣರು ತಮ್ಮ ತಾಯಂದಿರ ಮುಖಕ್ಕೆ ಪರದೆ ಹಿಡಿದು, ಮಕ್ಕಳು ಪಾದವನ್ನು ಹುಡುಕಿಕೊಂಡು ಪಾದ ಪೂಜೆ ಸಲ್ಲಿಸಿದ ಕ್ಷಣ ಅತ್ಯಂತ ರಮಣೀಯವಾಗಿತ್ತು. ಈ ವೇಳೆ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಿಸಲಾಯಿತು.

ವಿಶೇಷವಾಗಿ ಸಂಸ್ಥೆಯ ಸದಸ್ಯರು ಮಾತೃ ಪಾದಪೂಜೆ ಸಲ್ಲಿಸಿದ ಸಂದರ್ಭದಲ್ಲಿ ನೆರೆದ ಜನರು ಮೂಕ ಪ್ರೇಕ್ಷಕರಾಗಿ ಆನಂದಭಾಷ್ಪ ಸುರಿಸಿದ ಕ್ಷಣ ಪ್ರೇರಣಾದಾಯಕವಾಗಿತ್ತು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವೇಕಾನಂದ ವಿದ್ಯಾವರ್ಧಕದ ಸಂಘದ ಎ.ಸಿ.ಇ.ಓ, ವೆಂಕಟರಮಣ ರಾವ್ ಮಾತನಾಡಿ ಶಿಶು ಮಂದಿರದ ಶಿಕ್ಷಣ ದ ಅಗತ್ಯತೆಯ ಬಗ್ಗೆ ತಿಳಿಸಿದರು.

ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ರವರು ಮಾತಾಡಿ ಸಂಸ್ಥೆಯ ಸದಸ್ಯರ ಶ್ರಮ, ಪ್ರಯತ್ನ ಹಾಗೂ ಈ ಧರ್ಮ ರಾಷ್ಟ್ರೀಯ ಸೇವೆಯ ಕಾರ್ಯವನ್ನು ಶ್ಲಾಘಿಸಿದರು. 

ಶಿಶು ಮಂದಿರದ ಮಹಾ ಪೋಷಕರಾದ ಪುತ್ತೂರು ದೇವರಾತ ಭಟ್ ಮಾತಾಡಿ ಮಾತಾಜಿಯವರ ಪೋಷಕರ ಕಾಳಜಿಯ ಬಗ್ಗೆ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಸಭಾಧ್ಯಕ್ಷರಾದ ಸಂಚಾಲಕರು ನೇಮಿಚಂದ್ರ ಮುಗೇರಡ್ಕ  ಮಾತಾಡಿ ಸಂಸ್ಥೆಯ ಸದಸ್ಯರು ಮಾಡಿದ ಪಾದ ಪೂಜೆ ಪ್ರದರ್ಶನವಲ್ಲ ಇದು ಸಮಾಜಕ್ಕೆ ಬದಲಾವಣೆಯ ನಿದರ್ಶನ ಹಾಗೆಯೆ ಸಂಘಟನೆಯನ್ನು ಕಟ್ಟಿ ಸಮಾಜವನ್ನು ಬದಲಾಯಿಸೋಣ ಎಂದು ಹೊರಟ ಸದಸ್ಯರು, ಬದಲಾವಣೆ ನಮ್ಮಿಂದಲೇ ಆಗಲಿ ಎನ್ನುವ ಮಾತಿನೊಂದಿಗೆ ತಮ್ಮ ತಾಯಂದಿರ ಪಾದಪೂಜೆ ಯನ್ನು ಸಲ್ಲಿಸಿದರು. ಹಾಗೆಯೇ ಶಿಶು ಮಂದಿರದ ಮುಂದಿನ ಅಭಿವೃದ್ಧಿ ಕಾರ್ಯ ಗಳ ಜೊತೆಗೆ ಶಿಶು ಮಂದಿರದ ದಾನಿಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರು.

ಅಶ್ವಿತ್ ಕೆ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಶು ಮಂದಿರದ ಮಾತಾಜಿಯಾದ ಪುಷ್ಪಲತ ಸ್ವಾಗತಿಸಿ, ಅಧ್ಯಕ್ಷರಾದ ಅಶೋಕ್ ಬಿ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಉದಯ ಭಟ್ ಕೊಳಬ್ಬೆ, ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ಶಿಶು ಮಂದಿರದ ಮಾತಾಜಿಯವರು, ಜೈ ಶ್ರೀ ರಾಮ್ ಮಹಿಳಾ ಮಂಡಳಿಯವರು, ಮಾತ್ರ್ ಮಂಡಳಿಯವರು, ಪೋಷಕರು, ಊರ ಪರವೂರ ಶಿಶು ಮಂದಿರದ ಅಭಿಮಾನಿಗಳು ಭಾಗವಹಿಸಿದ್ದರು. 

ಸುಮಾರು 500 ಜನರಿಗೆ ಅನ್ನದಾನ ನಡೆಯಿತು.  ಶಿಶು ಮಂದಿರದ ಮಕ್ಕಳಿಂದ ಮಾತೃ ಮಂಡಳಿ ಮಹಿಳಾ ಮಂಡಳಿ ಸದಸ್ಯರಿಂದ, ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *