ಬಂಟ್ವಾಳ : ಭಜನೆಗಳ ಮೂಲಕ ಜನ ಮಾನಸದಲ್ಲಿ ಧಾರ್ಮಿಕ ಭಕ್ತಿ, ಸಂಪ್ರದಾಯಗಳು, ಸಂಸ್ಕಾರಗಳು ಉಳಿಯಲು ಸಾಧ್ಯ. ಇದರಿಂದ ಹಿಂದೂ ಸಮಾಜದ ಸಂಘಟನೆ ಗಟ್ಟಿಯಾಗಲಿದ್ದು ಒಗ್ಗಟ್ಟಿನಲ್ಲಿ ಹಿಂದೂ ಸಮಾಜದ ಮೇಲೆ ಜರಗುವ ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ಬಿಜೆಪಿ ಮುಖಂಡರಾದ ಸಂದೇಶ ಶೆಟ್ಟಿ ಅರೆಬೆಟ್ಟು ಹೇಳಿದರು.

ಅವರು ಕರ್ಪೆ ಗ್ರಾಮದ ನೆಕ್ಲಾಜೆ ಎಂಬಲ್ಲಿನ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಜರಗಿದ ಭಜನೆ ಕಾರ್ಯಕ್ರಮದಲ್ಲಿ ಕುಣಿತ ಭಜನೆ ತಂಡಗಳಿಗೆ ಗೌರವಿಸಿ ಮಾತನಾಡಿದರು. ಭವಿಷ್ಯದ ದಿನಗಳಲ್ಲಿ ಸಂಸ್ಕೃತಿ ಮತ್ತು ಧರ್ಮದ ರಕ್ಷಣೆಯಿಂದ ರಾಷ್ಟ್ರದ ರಕ್ಷಣೆ ಸಾಧ್ಯ ಎಂದೂ ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ ಈ ಹಿಂದೆ ಎಲ್ಲಾ ಮನೆಗಳಲ್ಲಿಯೂ ನಿತ್ಯವೂ ನಡೆಯುತ್ತಿರವ ಭಜನೆಗಳು ಇದೀಗ ಮಾಯವಾಗುತ್ತಿರುವುದರಿಂದ ಪ್ರತಿಯೊಂದು ಮನೆಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದ್ದು ಕುಟುಂಬಗಳು ವಿಭಜನೆಯಾಗುತ್ತಿವೆ. ಇದರಿಂದ ಅವಿಭಕ್ತ ಕುಟುಂಬ ಪದ್ಧತಿ ನಿಂತು ಹೋಗಿದ್ದು ಮುಂದಿನ ಸ್ವಚ್ಚಾ ಸಮಾಜದ ನಿರ್ಮಾಣಕ್ಕೆ ಮಕ್ಕಳಿಗೆ ಸಂಸ್ಕಾರದ ಪಾಠ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಬರೋಡ ಬ್ಯಾಂಕ್ ಅಧಿಕಾರಿ ಸಂತೋಷ ಕುಮಾರ್ ಚೌಟ ಮಡಂದೂರು, ಸುಂಕದಕಟ್ಟೆ ಮೇಳದ ವ್ಯವಸ್ಥಾಪಕರಾದ ರಮೇಶ ಕುಲಶೇಖರ, ಶಿಕ್ಷಕ ರವೀಂದ್ರ ನಾಯಕ್ ಕಿನ್ನಾಜೆ, ಪ್ರಮುಖರಾದ ಲಿಂಗಪ್ಪ ಪೂಜಾರಿ ನೆಕ್ಲಾಜೆ, ರಾಜೇಂದ್ರ ಪೂಜಾರಿ, ಸುಂದರ ಪೂಜಾರಿ, ಚಂದ್ರಶೇಖರ ಗೌಡ ರಾಯಿ, ಪೊಳಲಿ ಸಂತೋಷ್ , ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಾಮೋದರ ಪೂಜಾರಿ ಕರ್ಪೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.







