ಬೆಳ್ತಂಗಡಿ :ಅಪ್ರಾಪ್ತೆಯನ್ನು ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಸುದೇಮುಗೇರು ಎಂಬಲ್ಲಿ ಫೆ.9 ರಂದು ನಡೆದಿದೆ.

16 ವರ್ಷದ ಕಾಶಿಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ತನ್ನ ತಂದೆಯ ಸ್ಕೂಟರ್ ನಲ್ಲಿ ಸಂತೆಕಟ್ಟೆ ಬಸ್ ಹತ್ತಲು ಹೋಗುತ್ತಿದ್ದಳು. ಈ ವೇಳೆ ನಂಬರ್ ಪ್ಲೇಟ್ ಗೆ ಬಟ್ಟೆ ಕಟ್ಟಿದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಡ್ಡಿ ಕಾರಿನೊಳಗೆ ಎಳೆದು ತಂದಾಗ ಆಕೆ ಜೋರಾಗಿ ಬೊಬ್ಬೆ ಹಾಕಿ ವಿರೋಧ ವ್ಯಕ್ತಪಡಿಸಿದ್ದಾಳೆ. ಇತ್ತ ಹಿಂಭಾಗದಿಂದ ಸ್ಕೂಟರ್ ವೊಂದು ಬರುವುದನ್ನು ನೋಡಿದ ಅಪರಿಚಿತರು ಬಾಲಕಿಗೆ ಚೂರಿಯಿಂದ ಕೈಗೆ ,ಬೆರಳಿಗೆ ಚುಚ್ಚಿ ಕಾಲೇಜ್ ಬ್ಯಾಗ್ ಹಿಡಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಆಗಮಿಸಿದ ಪೊಲೀಸರು ವಿದ್ಯಾರ್ಥಿನಿ ಬಳಿಯಿಂದ ಮಾಹಿತಿ ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.







