ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 9 ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನ ಡಿ.20ವರೆಗೆ ನಡೆಯಲಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಅಧಿವೇಶನ ಕರೆಯುವ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಡತ ರವಾನಿಸಿದ್ದು, ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ್ದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಧಿಕಾರಿಗಳ ಸಭೆ ನಡೆಸಿದ್ದರು. ಅಲ್ಲದೆ, ಅಧಿವೇಶನ ನಡೆಸಲು ಅಗತ್ಯವಾದ ಸಿದ್ಧತೆಗಳನ್ನು ಮಾಡುವಂತೆ ಸೂಚನೆ ನೀಡಿದ್ದರು. ಇದೀಗ ರಾಜ್ಯಪಾಲರ ಸಹ ಅಧಿವೇಶನಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದ್ರೆ, ಅವರ ಭಾಷಣ ಈ ಬಾರಿ ಮಹತ್ವ ಪಡೆದುಕೊಳ್ಳಲಿದೆ. ಯಾಕಂದ್ರೆ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಮುಡಾ ಸೇರಿದಂತೆ ಕೆಲ ವಿಚಾರಗಳಲ್ಲಿ ಸಂಘರ್ಷ ಏರ್ಪಟ್ಟಿತ್ತು.
ಹಾಗೇ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕೆಲ ದೂರುಗಳನ್ನು ನೀಡಿದೆ. ಇದರಿಂದ ಬೆಳಗಾವಿ ಚಳಿಗಾಲದ ಅಧಿವೇಶದಲ್ಲಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಏನೆಲ್ಲಾ ಹೇಳಲಿದ್ದಾರೆ ಎನ್ನುವುದು ಕುತೂಹಲ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸನ್ನದ್ಧವಾಗಿವೆ. ಈಗಾಗಲೇ ಸಾಲು ಸಾಲು ಆರೋಪಗಳನ್ನು ಮಾಡಿರುವ ವಿಪಕ್ಷಗಳು ಅವುಗಳನ್ನೇ ಅಸ್ತ್ರವಾಗಿ ಮಾಡಿಕೊಂಡು ಸದನದಲ್ಲಿ ಧ್ವನಿ ಎತ್ತಲಿವೆ. ಮುಡಾ ಹಾಗೂ ವಾಲ್ಮೀಕಿ ಹಗರಣ ಈಗಾಗಲೇ ಕಳೆದ ಮುಂಗಾರು ಅಧಿವೇಶನದಲ್ಲಿ ಚರ್ಚೆಯಾಗಿದೆ. ಈಗ ಹೊಸದಾಗಿ ವಕ್ಫ್ ವಿವಾದ, ಬಿಪಿಎಲ್ ಕಾರ್ಡ್ ರದ್ದು ಸೇರಿದಂತೆ ಇತರೆ ಅಂಶಗಳನ್ನು ಮುಂದಿಟ್ಟುಕೊಂಡು ಸದನದಲ್ಲಿ ಆರ್ಭಟಿಸಲು ಸಜ್ಜಾಗಿದೆ.