ಬಂಟ್ವಾಳ: ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮವು ಜ. 25 ರಂದು ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ತುಂಬೆ ಕಡೆಗೋಳಿಯ ಗೋ ಸುರಭಿ ಭಕ್ತಿಭೂಷಣ್ ದಾಸ್ ಸ್ವಾಮೀಜಿ ಅವರು ಸನಾತನ ಧರ್ಮದ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಹಿಂದೆಯೂ ಆಗಿಲ್ಲ ,ಮುಂದೆಯೂ ಆಗುವುದಿಲ್ಲ ಆದರೆ ಅನೇಕ ವೈವಿಧ್ಯಮಯವಾದ ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಯುವಪೀಳಿಗೆಗೆ ಇದೆ ಎಂದರು. ಟಿ.ವಿ.ನಮ್ಮನ್ನು ಸೋಮಾರಿಯಾನ್ನಾಗಿ ಮಾಡಿದೆ. ನಮ್ಮೊಳಗಿನ ಮನಸ್ಸಿನಿಂದ ಪರಿವರ್ತನೆ ಆಗುವ ದೊಡ್ಡ ಸಂಕಲ್ಪ ಮಾಡುವ, ಅ ಮೂಲಕ ಸನಾತನ ಧರ್ಮದ ಉಳಿವು ನಿಶ್ಚಿತ ಎಂದು ತಿಳಿಸಿದರು.

ಹಿಂದೂ ರಾಷ್ಟ್ರೋತ್ಥಾನ ಸಮಿತಿ ಸದಸ್ಯ ಕುಮಾರ್ ಎಂ.ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಬಳಿಕ ಮಾತನಾಡಿದ ಅವರು ಎಲ್ಲಾ ಹಿಂದೂಗಳು ಹಿಂದುತ್ವದ ಒಳಗಡೆ ಬರಬೇಕು, ಜಾತಿ ವೈಷಮ್ಯ, ರಾಜಕೀಯ ವೈಷಮ್ಯಗಳಿರಬಾರದು ಎಂಬ ದೃಷ್ಟಿಯಿಂದ ಹಿಂದೂ ಸಮಾಜವನ್ನು ಜಾಗೃತಗೊಳಿಸುವುದಾಗಿದೆ. ಹಿಂದೂವಾಗಿ ಹುಟ್ಟಿದ ಮೇಲೆ ಹಿಂದೂವಾಗಿ ಪ್ರಕಟಿತವಾಗಬೇಕು. ಅ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.

ಡಾ| ಸರಸ್ವತಿ ಶ್ರೀನಾಥ್ ಭಟ್, ಅವರು ಮಾತನಾಡಿ ಒಳ್ಳೆಯ ಸಮಾಜದಿಂದ ಉತ್ತಮ ದೇಶದ ನಿರ್ಮಾಣವಾಗುತ್ತದೆ. ಹಿರಿಯರಿಗೆ ಗೌರವ, ಮಕ್ಕಳಿಗೆ ಸಂಸ್ಕಾರ ಜೀವನ ಕೊಡುವುದು ನಮ್ಮ ಜವಬ್ದಾರಿಯಾಗಿದೆ. ಆಧುನಿಕ ಯಾಂತ್ರಿಕ ಜಗತ್ತಿನಲ್ಲಿ ಕುಟುಂಬ ವ್ಯವಸ್ಥೆ ಹಾಳಾಗಿದ್ದು,ಸಮಾಜದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಹಿಂದೂ ಧರ್ಮದ ಅರಿವೆಂದರೆ ಹಣೆಗೆ ಕುಂಕುಮ ಹಾಕಿದರೆ ಸಾಲದು, ಜೀವನ ಪದ್ದತಿಯನ್ನು ಹೇಗೆ ಅಳವಡಿಸಿಕೊಂಡಿದ್ದೇವೆ ಎಂಬುದು ಬಹಳ ಮುಖ್ಯ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶೋಭಾಯಾತ್ರೆಯ ಚಾಲನೆಗೆ ಶುಭ ಹಾರೈಸಿದರು.

ವಿವಿಧೆಡೆಯಿಂದ ಆಗಮಿಸಿದ ಮೆರವಣಿಗೆ ಶ್ರೀ ರಾಮ ನಗರದಲ್ಲಿ ಸಂಗಮಗೊಂಡು ಕೇಂದ್ರ ಮೈದಾನದವರೆಗೆ ನೃತ್ಯ ಭಜನೆ, ಸ್ತಬ್ದಚಿತ್ರ ಸಹಿತ ಆಕರ್ಷಕ ಶೋಭಾಯಾತ್ರೆ ನಡೆಯಿತು. ಗೋಪೂಜೆ ನಡೆದು ಸಾಮೂಹಿಕ ಭಜನಾ ಹಾಡು, ಬಾಲಗೋಕುಲ ಮತ್ತು ಸ್ಥಳೀಯ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಪುಸ್ತಕ ಭಂಡಾರ,ಗೋ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ರಾಜೇಶ್ ಕೊನೆರೊಟ್ಟು ಸ್ವಾಗತಿಸಿ, ಪ್ರವೀಣ್ ಕುಪ್ಪೆಟ್ಟು ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ನಾಲ್ಕು ಗ್ರಾಮಗಳ ಹಿಂದೂ ಬಾಂದವರು ಉಪಸ್ಥಿತರಿದ್ದರು.





