Breaking
4 Feb 2026, Wed

ಪುತ್ತೂರಿನ ನ್ಯಾಯಾಲಯದಲ್ಲಿ ಜಡ್ಜ್ ಎದುರಲ್ಲೇ ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ ಯತ್ನ

ಪುತ್ತೂರು: ಜಡ್ಜ್ ಎದುರಲ್ಲೇ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಜ. 21 ರಂದು ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದವರನ್ನು ಪುತ್ತೂರು ತಾಲೂಕಿನ ಕಾವು ಮಾನ್ಯಡ್ಕ ನಿವಾಸಿ ರವಿ (35) ಎಂದು ಗುರುತಿಸಲಾಗಿದೆ.

ಕಳೆದ ಕೆಲ ದಿನಗಳಿಂದ ರವಿ ಮತ್ತು ಆತನ ಪತ್ನಿ ವಿದ್ಯಾಶ್ರೀ ನಡುವೆ ಕಲಹ ನಡೆದಿತ್ತು. ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಯತ್ನ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗಂಡ ಹೆಂಡತಿ ನಡುವಿನ ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದ್ದು ಠಾಣೆಗೆ ಹಾಜರಾಗುವಂತೆ ಪೊಲೀಸರು ರವಿಗೆ ಸೂಚನೆ ನೀಡಿದ್ದರು. ಈ ಮಧ್ಯೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಆಗಮಿಸಿ, 5ನೇ ಹೆಚ್ಚುವರಿ ನ್ಯಾಯಾಲಯದ ಜಡ್ಜ್ ಎದುರಲ್ಲಿಯೇ ವಿಷ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ.

ವಿಷ ಸೇವಿಸಿದ ಬಳಿಕ ರವಿ ನ್ಯಾಯಾಲಯದ ಆವರಣದಲ್ಲೇ ವಾಂತಿ ಮಾಡಿದ್ದು, ಇದನ್ನು ಗಮನಿಸಿದ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣವೇ ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *