ಸುಳ್ಯ: ಅಕ್ರಮವಾಗಿ ತೇಗದ ಮರ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅರಣ್ಯ ಇಲಾಖೆಯು ವಾಹನ ಚಾಲಕ ನಾಪೋಕ್ಲುವಿನ ಬಿ.ಎಂ. ಸಜನ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಪ್ರಮುಖ ಆರೋಪಿಯನ್ನು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಅಬ್ದುಲ್ ಅಬ್ದುಟ್ಟಿ ಎಂದು ಗುರುತಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮಡಿಕೇರಿ ಕಡೆಯಿಂದ ಬರುತ್ತಿದ್ದ ವಾಹನವನ್ನು ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಅಕ್ರಮವಾಗಿ ತೇಗದ ಮರ ಸಾಗಾಟ ಮಾಡುವುದು ಬೆಳಕಿಗೆ ಬಂದಿದೆ. ವಾಹನದ ಮೇಲ್ಬಾಗದಲ್ಲಿ ಟರ್ಪಲ್ ಹೊದಿಸಿ ಅದರ ಕೆಳಗೆ ಭತ್ತದ ಹೊಟ್ಟು ಇರುವ ಚೀಲಗಳ ನಡುವೆ ಮರೆ ಮಾಡಲಾಗಿತ್ತು. ತಪಾಸಣೆಯಲ್ಲಿಒಟ್ಟು 25 ಬೀಟಿ ಮರದ ತುಂಡುಗಳು ಪತ್ತೆಯಾಗಿದೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





