Breaking
3 Feb 2026, Tue

ಸಂಘವು ಯುವಕರನ್ನು ಬಲಿಷ್ಠಗೊಳಿಸುವ ಕೆಲಸ ಮಾಡುತ್ತಿದೆ – ಶ್ರೀಕಾಂತ ಶೆಟ್ಟಿ

ಪುತ್ತೂರು: ಇಂದು ಸಂಘವು ಯುವಕರನ್ನು ಬಲಿಷ್ಠಗೊಳಿಸುವ ಕೆಲಸ ಮಾಡುತ್ತಿದೆ. ನಾವು ನಮ್ಮತನವನ್ನು ಜಾಗೃತಗೊಳಿಸಿ, ಸಮಾಜವನ್ನು ಗಟ್ಟಿಗೊಳಿಸಬೇಕು ಹಾಗೂ ಬಂಗಾಳದ ಹಿಂದೂಗಳ ಪರವಾಗಿ ನಿಲ್ಲುವ ಕಾರ್ಯವಾಗಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.

ಅವರು ಜನವರಿ.12 ರಂದು ಪುತ್ತೂರಿನ ನೆಹರುನಗರದ ವಿವೇಕಾನಂದ ಆವರಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವ ಜನತೆ ಮತ್ತು ದೇಶಭಕ್ತಿ ಪರಿಕಲ್ಪನೆಯ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಅವರು ಧರ್ಮ ಮತ್ತು ಸಂಸ್ಕೃತಿ ಭಾರತದ ಆತ್ಮವಾಗಿದ್ದು, ಇದರ ಮೇಲೆ ದಾಳಿಗಳಾದಾಗಲೆಲ್ಲ ದೇಶ ಜಾಗೃತವಾಗಿದೆ. ಇಂದು ಭಾರತೀಯತೆಯ ಪುನರುತ್ತಾನದೊಂದಿಗೆ ದೇಶದ ಅಂತಶಕ್ತಿ ಜಾಗೃತಗೊಳ್ಳುತ್ತಿದ್ದು, ಬದಲಾಗುತ್ತಿರುವ ಪರಂಪರೆಗೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಅನ್ಯಾಯ ನಡೆಯುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಾತಿಗಣತಿಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ಬ್ರಿಟಿಷರ ವಿರುದ್ಧ ಹೋರಾಡಲು ವಂದೇ ಮಾತರಂ ಹಾಡಿಗೆ ಭಾವ ತುಂಬಿದ್ದೇ ವಿವೇಕಾನಂದರ ನುಡಿಗಳು. ನೈಜ ಪರಂಪರೆಯನ್ನು ಮರೆತು ಆತ್ಮವಿಸೃತಿಯಲ್ಲಿರುವವರಿಗೆ ದಾರಿ ತೋರಿಸಿದವರು ವಿವೇಕಾನಂದರು. ರಕ್ತಪಾತವಿಲ್ಲದೆ ಆಧ್ಯಾತ್ಮಿಕ ಚಿಂತನೆಯ ಮೂಲಕ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಅವರು. ನಾವು ಕುರಿ-ನರಿಗಳಂತೆ ಬದುಕದೆ ಸಿಂಹದಂತೆ ಬದುಕಬೇಕು, ಎಂದರು.

ಇದೇ ವೇಳೆ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಪ್ರಯುಕ್ತ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳ ವಿವಿಧ ವಿಭಾಗದ ಸುಮಾರು 10 ಸಾವಿರ ಹಾಗೂ ಗ್ರಾಮಾಂತರ ಶಾಲೆಗಳ 10 ಸಾವಿರ ಸೇರಿ ಒಟ್ಟು 20 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ನೆನಪಿಗಾಗಿ ಸಂಘ ಶತಾಬ್ದಿ ಪರಿಕಲ್ಪನೆಯಡಿ ಸಂಘ ನಡೆದು ಬಂದ ಹಾದಿಯನ್ನು ಬಿಂಬಿಸುವ ಒಂದೂವರೆ ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವೇಕಾನಂದ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸತೀಶ್ ರಾವ್ ವಂದಿಸಿದರು. ಪಾಲಿಟೆಕ್ನಿಕ್ ಉಪನ್ಯಾಸಕಿ ಉಷಾಕಿರಣ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *