ಬೆಂಗಳೂರು: ಪ್ರಾಧ್ಯಾಪಕರ ಕಿರುಕುಳಕ್ಕೆ ನೊಂದ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.
ಮೃತಳನ್ನು ಯಶಸ್ವಿನಿ (23) ಎಂದು ಗುರುತಿಸಲಾಗಿದೆ.

ಯಶಸ್ವಿನಿ ಬೊಮ್ಮನಹಳ್ಳಿಯ ಪ್ರತಿಷ್ಠಿತ ಖಾಸಗಿ ಡೆಂಟಲ್ ಕಾಲೇಜಿನಲ್ಲಿ Oral Medicine and Radiology ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಸೆಮಿನಾರ್ ಗೆ ಅವಕಾಶ ನೀಡದ ಜೊತೆಗೆ ರೇಡಿಯಾಲಜಿ ಕೇಸ್ ಕೂಡ ನೀಡದೆ ಕಾಲೇಜಿನಲ್ಲಿ ಈಕೆಗೆ ಕಿರುಕುಳ ನೀಡಲಾಗಿದೆ. ಇದರ ನಡುವೆ ಬುಧವಾರ ಕಣ್ಣು ನೋವಿನ ಕಾರಣಕ್ಕೆ ಕಾಲೇಜಿಗೆ ಯಶಸ್ವಿನಿ ಹೋಗಿರಲಿಲ್ಲ. ಮಾರನೇ ದಿನ ಕಾಲೇಜಿಗೆ ಬಂದಾಗ ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ? ಪೂರ್ತಿ ಬಾಟಲ್? ಹಾಕಿಕೊಂಡ್ಯಾ? ಎಂದೆಲ್ಲ ಕೇಳಿ ಪ್ರಾಧ್ಯಾಪಕರು ಅವಮಾನ ಮಾಡಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಈಕೆ ಪ್ರಾಣಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾಳೆ ಎನ್ನಲಾಗಿದೆ.

ಮೃತ ವಿದ್ಯಾರ್ಥಿನಿಯ ಸ್ನೇಹಿತರು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದು, ಯಶಸ್ವಿನಿ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.



