Breaking
23 Sep 2026, Wed

ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ; ಬೆಳಗ್ಗೆ ಮೃತದೇಹ ಪತ್ತೆ

ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಗ್ಗೆ ಮೃತದೇಹವನ್ನು ಶೋಧ ನಡೆಸಿ ಮೇಲಕ್ಕೆತ್ತಲಾಯಿತು.

ಮೃತರನ್ನು ಕೋಟೇಶ್ವರ ಸಮೀಪದ ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ ಪದ್ಮನಾಭ ಆಚಾರ್ಯ (37) ಎಂದು ಗುರುತಿಸಲಾಗಿದೆ. ಕುಂದಾಪುರದ ಹೆಂಚಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಕಳೆದ ನಾಲ್ಕು ತಿಂಗಳಿನಿಂದ ಕೆಲಸಕ್ಕೆ ತೆರಳುತ್ತಿರಲಿಲ್ಲ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಮನೆಯಿಂದ ತೆರಳಿದ್ದ ಪದ್ಮನಾಭ ಅವರು ರಾತ್ರಿ ಕಳೆದರೂ ಮನೆಗೆ ವಾಪಸ್ಸಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದು, ರಾತ್ರಿ ವೇಳೆ ದೇವಸ್ಥಾನದ ಸಮೀಪ ಅವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು.

ಕೋಟಿತೀರ್ಥ ಪುಷ್ಕರಣಿಯ ಪೂರ್ವ ಭಾಗದ ಮೆಟ್ಟಿಲಿನ ಮೇಲೆ ಅವರ ಚಪ್ಪಲಿ ಹಾಗೂ ಟೋಪಿ ಪತ್ತೆಯಾಗಿದ್ದು, ಅವರು ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ಶೋಧ ಕಾರ್ಯ ಆರಂಭಿಸಲಾಯಿತು.

ನಿತ್ಯ ಕೆರೆಯಲ್ಲಿ ಈಜಲು ಬರುವ ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಸತ್ಯನಾರಾಯಣ ಮಂಜ ಮೊದಲಾದವರು ಬೋಟ್ ಸಹಾಯದಿಂದ ಶೋಧ ನಡೆಸಿದರು. ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಮೃತದೇಹ ನೀರಿನಲ್ಲಿ ಪತ್ತೆಯಾಯಿತು.

ನಂತರ ಸ್ಥಳಕ್ಕೆ ಆಗಮಿಸಿದ ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ತಂಡ, ಸ್ಥಳೀಯ ಈಜುಗಾರರ ನೆರವಿನಿಂದ ಮೃತದೇಹವನ್ನು ಮೇಲಕ್ಕೆತ್ತಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *