ಕುಂದಾಪುರ: ಆಟವಾಡಲು ತೆರಳಿದ್ದ ಬಾಲಕ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದ ಪ್ರಕರಣವನ್ನು ಕುಂದಾಪುರದ ಗಂಗೊಳ್ಳಿ ಠಾಣೆಯ ಪೊಲೀಸರು ಬೇಧಿಸಿದ್ದಾರೆ.
ಬುಧವಾರದಂದು ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಜ್ಜಾಡಿ ಪರಿಸರದ 10 ವರ್ಷದ ಬಾಲಕನೋರ್ವ ಶಾಲೆ ಮಗಿಸಿ ಮನೆಗೆ ಹಿಂದಿರುಗಿದ್ದ. ಬಳಿಕ ಬೆಣ್ಗೇರೆ ನಾಗ ದೇವಸ್ಥಾನದ ಬಳಿ ಸ್ನೇಹಿತರೊಂದಿಗೆ ಆಡವಾಡಲು ತೆರಳಿದ್ದ.

ಸಂಜೆ 06:30ರ ತನಕವೂ ಬಾಲಕ ಅದೇ ಪರಿಸರದಲ್ಲಿ ಆಟವಾಡುತ್ತಿರುವುದನ್ನು ಆತನ ಪಕ್ಕದ ಮನೆಯವರೂ ಗಮನಿಸಿದ್ದರು. ಆದರೆ ರಾತ್ರಿ 07:00 ಗಂಟೆ ಆದರೂ ಆತ ಮನೆಗೆ ಹಿಂದಿರುಗದೇ ಇರುವುದನ್ನು ಗಮನಿಸಿದ ಬಾಲಕನ ಮಾವ ಪಕ್ಕದ ಮನೆ ಹಾಗೂ ಸುತ್ತಮುತ್ತಲು ವಿಚಾರಿಸಿದ್ದಾರೆ. ಎಲ್ಲಿಯೂ ಬಾಲಕನ ಸುಳಿವು ಸಿಗದಿದ್ದಾಗ ಊರವರು ಸೇರಿ ಹುಡುಕಾಟ ನಡೆಸಿದ್ದಾರೆ.

ಬಾಲಕ ಆಡವಾಡುತ್ತಿದ್ದ ಸುತ್ತಲಿನ ಪರಿಸರದಲ್ಲಿ ನೂರಾರು ಮಂದಿ ಸ್ಥಳೀಯರು ಜಮಾಯಿಸಿ ಹುಡುಕಾಟ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆದ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಪವನ್ ನಾಯಕ್ ಹಾಗೂ ಅವರ ತಂಡ ರಾತ್ರಿ ಮತ್ತೆ ಹುಡುಕಾಟ ಮುಂದುವರಿಸಿದರು. ಪವನ್ ನಾಯಕ್ ಅವರು ಬಾಲಕನ ಮನೆಯಿಂದ ಸುಮಾರು 250 ಮೀಟರ್ ದೂರದಲ್ಲಿರುವ ಬಂಡೆ ಕಲ್ಲಿನ ಕೆಳಗಡೆ ಪೊಟರೆಯಲ್ಲಿ ಮಲಗಿಕೊಂಡಿದ್ದ ಬಾಲಕನನ್ನು ಪತ್ತೆ ಹಚ್ಚಿದ್ದಾರೆ.

ಬಾಲಕನ ತಂದೆ ತಾಯಿ ಮೃತರಾಗಿದ್ದು ಸಂಬಂಧಿಕರು ಪಾಲನೆ ಮಾಡುತ್ತಿದ್ದಾರೆ. ಆಡವಾಡುತ್ತಿದ್ದ ಸಂದರ್ಭ ಆತನಿಗೆ ಚಿಕ್ಕ ಗಾಯವಾಗಿದ್ದು ಮನೆಯಲ್ಲಿ ಬೈಯಬಹುದು ಎಂಬ ಕಾರಣಕ್ಕೆ ಹೆದರಿ ಅಡಗಿ ಕುಳಿತಿದ್ದ ಎನ್ನಲಾಗಿದೆ.

ತಕ್ಷಣ ಬಾಲಕನನ್ನು ರಕ್ಷಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿದ್ದು , ಪೊಲೀಸರ ಕ್ಷೀಪ್ರ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


