ಉಡುಪಿ: ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಸೈಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ನಡೆದಿದೆ.
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಂಶಿತ್ ( 17) ಮೃತ ವಿದ್ಯಾರ್ಥಿಯಾಗಿದ್ದಾನೆ.

ಭಾನುವಾರ ಕಾರ್ಕಳದಲ್ಲಿ ವಂಶಿತ್ ಅವರ ತಂದೆಯ ಸಂಬಂಧಿ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಹೀಗಾಗಿ ಆತನ ಸಂಬಂಧಿಯೋರ್ವರು ಸೈಬ್ರಕಟ್ಟೆಯಲ್ಲಿರುವ ಈತನ ಮನೆಗೆ ಬಂದು ಸ್ಕೂಟಿ ನಿಲ್ಲಿಸಿ ಹೋಗಿದ್ದಾರೆ. ನಂತರ ಅಲ್ಲಿಂದ ಕುಟುಂಬದವರೊಂದಿಗೆ ಕಾರ್ಕಳಕ್ಕೆ ತೆರಳಿದ್ದಾರೆ.

ಈ ಸಂದರ್ಭ ಸಂಬಂಧಿಕರು ತಂದಿಟ್ಟಿದ್ದ ಸ್ಕೂಟಿಯನ್ನು ಕಲಿಯುವ ಸಲುವಾಗಿ ವಂಶಿಕ ಸ್ಕೂಟಿ ಓಡಿಸಿಕೊಂಡು ಹೋಗಿದ್ದಾನೆ. ಈ ವೇಳೆ ಸ್ಕೂಟಿ ನಿಯಂತ್ರಣ ತಪ್ಪಿ ಹಾನಿಯಾಗಿದೆ. ಈ ವಿಚಾರಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ ಮನೆ ಹತ್ತಿರ ಇದ್ದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮನೆಯವರು ಕಾರ್ಯಕ್ರಮ ಮುಗಿಸಿ ಬಂದಾಗ ಮನೆಯಲ್ಲಿ ಯುವಕ ಇರಲಿಲ್ಲ. ಹೀಗಾಗಿ ಸ್ನೇಹಿತರು ಹಾಗೂ ಮನೆಯ ಪಕ್ಕದವರು ಸ್ಥಳೀಯ ಪರಿಸರದಲ್ಲಿ ಹುಡುಕಾಟ ನಡೆಸಿದಾಗ ಸ್ಕೂಟಿ ಹಾಗೂ ಮೊಬೈಲ್, ಹೆಲ್ಮೆಟ್ ಪತ್ತೆಯಾಗಿದೆ. ನಂತರ ಅಲ್ಲೇ ಸ್ವಲ್ಪ ದೂರದಲ್ಲಿ ಚಪ್ಪಲಿ ಹಾಗೂ ಶರ್ಟ್ ಪತ್ತೆಯಾಗಿದೆ. ಹೊಂಡವನ್ನು ನೋಡಿದಾಗ ಮೃತದೇಹ ಪತ್ತೆಯಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



