ಮೂಡುಬಿದಿರೆ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಮೂಡುಬಿದಿರೆ ನ್ಯಾಯಾಲಯವು ಆರೋಪಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ಪಾದರಕ್ಷೆ ಅಂಗಡಿಯೊಂದನ್ನು ನಡೆಸುತ್ತಿದ್ದ ತಾಳಿಪಾಡಿ ಗ್ರಾಮದ ಜೋಡುಬೈಲು ನಿವಾಸಿ ಸಂಶುದ್ದೀನ್ ಎಂಬಾತ ಶಿಕ್ಷೆಗೆ ಒಳಗಾಗಿರುವ ಆರೋಪಿ.

2021ರ ಡಿಸೆಂಬರ್ ತಿಂಗಳಿನಲ್ಲಿ ಮಧ್ಯಾಹ್ನ 12.20 ರ ಸುಮಾರಿಗೆ ಈತನ ಅಂಗಡಿಗೆ ಮಹಿಳೆಯೊಬ್ಬರು ಚಪ್ಪಲಿ ಖರೀದಿಸಲು ಬಂದಿದ್ದಾರೆ. ಈ ವೇಳೆ ಆರೋಪಿಯು ಚಪ್ಪಲಿ ತೋರಿಸುವ ನೆಪದಲ್ಲಿ ಮಹಿಳೆಯನ್ನು ಅಂಗಡಿಯ ಕಂಪಾರ್ಟ್ಮೆಂಟ್ ಒಳಗೆ ಕರೆದೊಯ್ದು ಭುಜ ಮುಟ್ಟಿ, ಲೈಂಗಿಕವಾಗಿ ಕಿರುಕುಳ ನೀಡಿದ್ದಲ್ಲದೆ ಬಟ್ಟೆ ಕಳಚುವಂತೆ ಒತ್ತಾಯಿಸಿ ಅಸಭ್ಯವಾಗಿ ವರ್ತಿಸಿದ್ದ.
ಈ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬಗ್ಗೆ ಅಂದಿನ ಪಿಎಸ್ಐ ವಿನಾಯಕ ತೊರಗಲ್ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಮೂಡುಬಿದಿರೆ ನ್ಯಾಯಾಲಯವು, ಸಾಕ್ಷ್ಯಧಾರಗಳ ಆಧಾರದ ಮೇಲೆ ಸಂಶುದ್ದೀನ್ ದೋಷಿ ಎಂದು ತೀರ್ಮಾನಿಸಿ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.




