ಪುತ್ತೂರು : ತೋಟದ ಮಧ್ಯೆ ಹಾದುಹೋಗಿದ್ದ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ 900ಕ್ಕೂ ಅಧಿಕ ಅಡಿಕೆ ಗಿಡಗಳು ಸುಟ್ಟು ಕರಕಲಾದ ಘಟನೆ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಬೂಡಿಯಾರಿನಲ್ಲಿ ಜ.6 ರಂದು ನಡೆದಿದೆ.
ಘಟನೆಯಲ್ಲಿ ಬೂಡಿಯಾರಿನ ಗಣೇಶ್ ರೈ ಎಂಬವರ ತೋಟ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಒಂದು ವರ್ಷದ ಹಿಂದಷ್ಟೇ ನೆಟ್ಟ ಅಡಿಕೆ ಗಿಡಗಳು ಉತ್ತಮವಾಗಿ ಬೆಳೆದು ನಿಂತಿದ್ದವು. ಮಂಗಳವಾರ ಮಧ್ಯಾಹ್ನದ ವೇಳೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದು, ವಿದ್ಯುತ್ ಹರಿಯುತ್ತಿದ್ದ ತಂತಿಯಿಂದಾಗಿ ಬೆಂಕಿ ಹತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ತೋಟಕ್ಕೆ ವ್ಯಾಪಿಸಿದೆ.
ಪರಿಣಾಮ 900 ಅಡಿಕೆ ಗಿಡಗಳ ಜೊತೆಗೆ ತೋಟಕ್ಕೆ ನೀರು ಬಿಡಲು ಹಾಕಿದ್ದ ಪೈಪ್ಗಳು ಕೂಡ ಸುಟ್ಟುಹೋಗಿದ್ದು, ಸುಮಾರು 5 ಲ.ರೂ. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.




