ಬಂಟ್ವಾಳ: ವಿದುಷಿ ಉಮಾ ವಿಷ್ಣು ಹೆಬ್ಬಾರ್ ಇವರು ಆರಂಭಿಸಿ ಮುನ್ನಡೆಸುತ್ತಿರುವ ಮುಡಿಪಿನ ‘ಭಾರತೀ ನೃತ್ಯಾಲಯ’ದ ಹನ್ನೊಂದನೇ ವರ್ಷದ ‘ವಾರ್ಷಿಕ ಸಂಭ್ರಮ’ ಕಾರ್ಯಕ್ರಮವು ಮುಡಿಪು ಆಡಿಟೋರಿಯಂ ನಲ್ಲಿ ವಿಜೃಂಭಣೆಯಿಂದ ನಡೆಯಿತು.
ಮುಡಿಪಿನ ಶ್ರೀ ಭಾರತೀ ವಿದ್ಯಾ ಸಂಸ್ಥೆಯ ಸಂಚಾಲಕರಾದ ಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಹಾಗೂ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಇವರಿಗೆ ಗುರುವಂದನೆ ನಡೆಯಿತು.

ವಿದುಷಿ ಉಮಾ ವಿಷ್ಣು ಹೆಬ್ಬಾರ್ ಇವರ ನಟುವಾಂಗ, ಶಶಿಕಲಾ ಪ್ರಭು, ಕಾಡುಮಠ ಇವರ ಹಾಡುಗಾರಿಕೆ, ಕುಮಾರಿ ಸಾನಿಧ್ಯ ಕಾಡುಮಠ ಇವರ ವಯೋಲಿನ್ ಹಾಗೂ ಶ್ರೀ ಮನೋಹರ ರಾವ್, ಮಂಗಳೂರು ಇವರ ಮೃದಂಗ ದೊಂದಿಗೆ ನೃತ್ಯಾಲಯದ ಮಕ್ಕಳಿಂದ ನಡೆದ ‘ನೃತ್ಯಾರ್ಪಣ’ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಶ್ರೀ ಭಾರತೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ, ಮುಖ್ಯೋಪಾಧ್ಯಾಯರಾಗಿ ಇತ್ತೀಚೆಗೆ ನಿವೃತ್ತರಾದ ರಾಮಕೃಷ್ಣ ಭಟ್ ಇವರನ್ನು ಗೌರವಿಸಲಾಯಿತು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕಣಂತೂರಿನ ಧರ್ಮ ಅರಸು ಶ್ರೀ ತೋಡಕುಕ್ಕಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ದೇವಿಪ್ರಸಾದ್ ಪೊಯ್ಯತ್ತಾಯರು ಭರತನಾಟ್ಯ, ಯಕ್ಷಗಾನ, ಸಂಗೀತ ಮುಂತಾದ ಭಾರತೀಯ ಕಲೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಮಾತನಾಡಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಶೆಟ್ಟಿ ಯವರು ಭರತನಾಟ್ಯದ ಮಹತ್ವದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ 2024-25 ನೇ ಸಾಲಿನಲ್ಲಿ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ವಿಶ್ವ ವಿದ್ಯಾನಿಲಯದಿಂದ ನಡೆಸಲಾದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಭಾರತೀ ನೃತ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಭಾರತೀ ನೃತ್ಯಾಲಯದ ವಿದ್ಯಾರ್ಥಿಗಳು ತಮ್ಮ ನೃತ್ಯ ಗುರು ವಿದುಷಿ ಉಮಾ ವಿಷ್ಣು ಹೆಬ್ಬಾರ್ ಇವರಿಗೆ ನೃತ್ಯದ ಮೂಲಕ ವಿಶಿಷ್ಟವಾಗಿ ಗುರುವಂದನೆ ಸಲ್ಲಿಸಿದರು.

ಕಾರ್ಯಕ್ರಮವನ್ನು ವಿದುಷಿ ಉಮಾ ವಿಷ್ಣು ಹೆಬ್ಬಾರ್ ಸ್ವಾಗತಿಸಿ, ಮಾನಸ ಭಾಸ್ಕರ್ ವಂದಿಸಿದರು. ಪ್ರವೀಣ್ ಕಾಮತ್, ಮಂಜುನಾಥ ಭಟ್ ಮತ್ತು ಚಂಚಲಾ ದಿನೇಶ್ ಇವರುಗಳು ಕಾರ್ಯಕ್ರಮ ನಿರ್ವಹಿಸಿದರು.
ಕೊನೆಯಲ್ಲಿ ವಿದ್ಯಾರ್ಥಿಗಳಿಂದ ನಡೆದ ‘ನೃತ್ಯ ಸಿಂಚನ’ ಎಲ್ಲರ ಮನಸೂರೆಗೊಂಡಿತು.



