ಬಂಟ್ವಾಳ: ವಿಕಾಸಂ ಸೇವಾ ಫೌಂಡೇಶನ್ ಬಿ.ಸಿ.ರೋಡ್, ಬಂಟ್ವಾಳ ತಾಲೂಕು ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ ತಾಲೂಕು ಹಾಗೂ ಸಕ್ಷಮ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ದಿವ್ಯಾಂಗರ ದಿನಾಚರಣೆಯು ಇಂದು (ಡಿ. 3) ಬಿ. ಸಿ.ರೋಡಿನ ಡಾ| ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಮಂಗಳೂರಿನ ಸಂಜೀವಿನಿ ಡಿವೈನ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್ ನ ರೇವತಿ ಸನಿಲ್ ಅವರು ಮಕ್ಕಳ ಕೈಯಲ್ಲೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಇಂದು ಸಮಾಜದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ಸಮಾಜಕ್ಕೆ ಎಲ್ಲರನ್ನೂ ಸಮದೃಷ್ಟಿಯಲ್ಲಿ ಗುರುತಿಸುವ ವಿಕಾಸಂ ನಂತಹ ಸಂಸ್ಥೆಗಳು ಅಗತ್ಯವಿದೆ ಎಂದರು.

ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನಲ್ಲಿ ಬಹುತ್ವ ಎಂಬುದು ಭಗವಂತನ ಸಂಕಲ್ಪವಾಗಿದೆ. ದಿವ್ಯಾಂಗ ಮಕ್ಕಳಲ್ಲಿ ಮತ್ಸರವಿಲ್ಲ, ಅವರಲ್ಲಿ ನಿರ್ಮಲ ಪ್ರೇಮವಿದೆ. ಅವರೊಂದಿಗೆ ಬೆರೆಯುವುದು ನಮ್ಮ ಭಾಗ್ಯ, ಎಲ್ಲ ಮಕ್ಕಳೂ ಶುದ್ಧ ಮನಸ್ಸಿನವರಾಗಿದ್ದು, ಅವರಿಗೆ ಸಹಕಾರಿಯಾಗಿ ನಾವು ತೊಡಗಿಸಿಕೊಳ್ಳಬೇಕು ಎಂದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ, ಮಾತನಾಡಿ, ಸರಕಾರ ದಿವ್ಯಾಂಗ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದೆ. ಯು.ಡಿ.ಐ.ಡಿ. ಕಾರ್ಡ್ ಪಡೆಯುವ ವಿಧಾನ ಇನ್ನಷ್ಟು ಸರಳವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ನೌಕರರ ಸಂಘದ ಉಪ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ನಾಯಕ್ ಕೊಡ್ಮಾಣ್, ದಕ್ಷಿಣ ಕನ್ನಡ ಜಿಲ್ಲೆ ಸಕ್ಷಮ ಕಾರ್ಯದರ್ಶಿ ಹರೀಶ್ ಪ್ರಭು, ಬಿ.ಸಿ.ರೋಡಿನ ಉದ್ಯಮಿ ರೊಟೇರಿಯನ್ ನಾರಾಯಣ್ ಪೆರ್ನೆ, ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಅಶ್ವಿನಿ, ಸೇವಾಭಾರತಿ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್, ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ, ವಿಕಾಸಂ ಸೇವಾ ಫೌಂಡೇಶನ್ ಸಹ ಸಂಸ್ಥಾಪಕ ಹರೀಶ್ ಜೋಗಿ, ಕ್ಷೇತ್ರ ಸಮನ್ವಯಾಧಿಕಾರಿ ವಿದ್ಯಾ ಕುಮಾರಿ ಎಮ್. ಎನ್, ಶಿಕ್ಷಣ ಸಂಯೋಜಕರು ರಮಾನಂದ.ಎನ್, ಮಕ್ಕಳು, ಪೋಷಕರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ವಿಕಾಸಂ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಸ್ವಾಗತಿಸಿದರು. ಸಹಸಂಸ್ಥಾಪಕ ಧರ್ಮಪ್ರಸಾದ್ ರೈ ವಂದಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಸುರೇಖಾ ಯಳವರ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿದ ದಿವ್ಯಾಂಗ ಮಕ್ಕಳಿಗೆ ಸಹಕಾರಿಯಾಗುವ ವಸ್ತುಗಳನ್ನು ಒದಗಿಸಲಾಯಿತು.




