ಬಂಟ್ವಾಳ: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಅನುಷ್ಠಾನ ಗೊಳ್ಳುತ್ತಿರುವ ಐಸಿಡಿಎಸ್ ಯೋಜನೆಯ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳಿಗೆ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭ ಮಾಡಿರುವುದರಿಂದ ಅಂಗನವಾಡಿಗಳಿಗೆ ಬರುವ ಸಮಾಜದ ಎಲ್ಲಾ ವರ್ಗಗಳ ಬಡ ಮಕ್ಕಳಿಗೆ ಅತ್ಯುತ್ತಮವಾದ ಎಲ್ಲಾ ಸ್ತರದ ಕಲಿಕೆಯನ್ನು ನೀಡಿದಂತಾಗುತ್ತದೆ ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ಎಲ್ಲಾ ಪೋಷಕರು ತಮ್ಮ 3 ವರ್ಷದಿಂದ 6 ವರ್ಷ ವರೆಗಿನ ಮಕ್ಕಳಿಗೆ ಸ್ಥಳೀಯ ಅಂಗನವಾಡಿಗಳಿಗೆ ಸೇರ್ಪಡೆ ಮಾಡುವುದರೊಂದಿಗೆ ಕೇಂದ್ರ ಸರಕಾರದ ಮಹತ್ವಪೂರ್ಣ ಯೋಜನೆಗಳಾದ ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ, ಪ್ರಧಾನ ಮಂತ್ರಿ ಪೋಷನ್ ಅಭಿಯಾನ, ಬೇಟಿ ಬಚಾವೋ, ಬೇಟಿ ಪಡಾವೋ, ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಮುಂತಾದ ಹಲವಾರು ಜನೋಪಯೋಗಿ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಪ್ರಯೋಜನ ಪಡೆಯುವಂತೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು ಪೋಷಕರಿಗೆ ವಿನಂತಿ ಮಾಡಿದರು.

ಅವರು ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಮದಂಗೋಡಿ ಅಂಗನವಾಡಿಯಲ್ಲಿ ಐಸಿಡಿಎಸ್ ಯೋಜನೆಯ ಸುವರ್ಣ ಮಹೋತ್ಸವ ಅಂಗವಾಗಿ ಪೂರ್ವ ಪ್ರಾಥಮಿಕ ತರಗತಿಗೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ತುಳಸಿ, ಸಮಿತಿ ಸದಸ್ಯರಾದ ರಂಜಿನಿ ದಿವಾಕರ್,ಲೀಲಾ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ, ಸಹಾಯಕಿ ಸಾಯಿದಾ, ಸ್ತ್ರೀಶಕ್ತಿ ಸದಸ್ಯರು, ಬಾಲವಿಕಾಸ ಸಮಿತಿಯ ಸದಸ್ಯರು, ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.




