ಬೆಂಗಳೂರು : ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಇನ್ನೋವೇಷನ್ ಕೌನ್ಸಿಲ್ ಆಶ್ರಯದಲ್ಲಿ, ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ವಿಭಾಗಗಳ ಜಂಟಿ ಸಂಘಟನೆಯಲ್ಲಿ ನಾಲ್ಕು-ದಿನಗಳ ಐಐ ಮತ್ತು ರೋಬೋಟಿಕ್ಸ್ ತರಬೇತಿ ಕಾರ್ಯಕ್ರಮವು ನ. 20 ರಿಂದ 25 ರ ವರೆಗೆ ಮ್ಯಾಜಿಸ್ ಬ್ಲಾಕ್’ನ ಕಾನ್ಫರೆನ್ಸ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಸಮನ್ವಯಕರಾಗಿದ್ದ ಡಾ. ಅನ್ನಿ ಸಿರಿಯನ್, ಪ್ರೇಮ್ ಮತ್ತು ಅರ್ರನ್ ಇವರು, ಡೀನ್ ಡಾ. ಬೋಜಮ್ಮಾ, ರೆ। ಫಾ। ಡೆನ್ಝಿಲ್ ಮತ್ತು ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತಿ ಅವರ ಶೈಕ್ಷಣಿಕ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ತಿಂಕ್‌ಪ್ರೋ ಅಕಾಡೆಮಿಯ ಬೋಧಕರಾದ ತರುಣ್ ಶರ್ಮಾ ಅವರು ನಡೆಸಿದ ಉದ್ಘಾಟನಾ ಸಭೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತರಬೇತಿಯ ಉದ್ದೇಶಗಳು, ರಚನೆ ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ತಿಳಿಸಿ, ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್’ನ ಮೂಲಭೂತ ಪರಿಕಲ್ಪನೆಗಳೊಂದಿಗೆ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಮಾರ್ಗದರ್ಶನದೊಂದಿಗೆ ಪ್ರಾಯೋಗಿಕ ಕೋಡಿಂಗ್ ಸೆಶನ್’ಗಳು ಮತ್ತು ವಿದ್ಯಾರ್ಥಿಗಳು ಆರಂಭಿಕ ರೋಬೋಟಿಕ್ ಮಾದರಿಯನ್ನು ನಿರ್ಮಿಸಿ ಪ್ರೋಗ್ರಾಮ್ ಮಾಡುವ ಚಟುವಟಿಕೆ ನಡೆಯಿತು.

ಎರಡನೇ ದಿನದ ಕಾರ್ಯಕ್ರಮವು ರೇಂಜ್ ಸೆನ್ಸರ್ ಸಜ್ಜಿತವಾದ ರೋಬೋಟಿಕ್ ಕಾರಿನ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ನಡೆಯಿತು. ರೇಂಜ್ ಸೆನ್ಸರ್‌ಗಳ ಕಾರ್ಯವಿಧಾನ ಮತ್ತು ನಿಜ-ಜಗತ್ತಿನ ಅನ್ವಯಗಳ ಕುರಿತು ವಿವರವಾದ ಬೋಧನೆ ನಡೆಯಿತು. ರೋಬೋಟಿಕ್ ಮಾದರಿಯನ್ನು ಜೋಡಿಸಿ, ಪರಿಸರದ ಉತ್ತೇಜನೆಗಳಿಗೆ ಪ್ರತಿಕ್ರಿಯಿಸುವಂತೆ ಅದನ್ನು ಪ್ರೋಗ್ರಾಮ್ ಮಾಡುವ ಪ್ರಾಯೋಗಿಕ ಭಾಗವನ್ನು ವಿದ್ಯಾರ್ಥಿಗಳು ಮಾಡಿದರು.
ಮೂರನೇ ದಿನ ಸ್ವತಂತ್ರ ಮತ್ತು ಸಹಯೋಗಿ ಸಮಸ್ಯೆ-ಪರಿಹಾರ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸಿತು. ವಿದ್ಯಾರ್ಥಿಗಳಿಗೆ ಗುಂಪು ಪ್ರಾಜೆಕ್ಟ್‌ಗಳನ್ನು ನೀಡಲಾಗಿದ್ದು ಅದರಲ್ಲಿ ಅಡಚಣೆ ಪತ್ತೆಹಚ್ಚಲು ಅಲ್ಟ್ರಾಸೋನಿಕ್ ಸೆನ್ಸರ್‌ಗಳನ್ನು ಒಳಗೊಂಡ ರೋಬೋಟಿಕ್ ಮಾದರಿಗಳನ್ನು ವಿನ್ಯಾಸಗೊಳಿಸುವುದು, ಜೋಡಿಸುವುದು ಮತ್ತು ಪ್ರೋಗ್ರಾಮ್ ಮಾಡುವುದು ಸೇರಿಸುವುದಾಗಿತ್ತು. ಈ ಚಟುವಟಿಕೆಯು ಹಿಂದಿನ ಅವಧಿಗಳಲ್ಲಿ ಕಲಿತ ಪರಿಕಲ್ಪನೆಗಳನ್ನು ಅನ್ವಯಿಸಲು ಮಾತ್ರವಲ್ಲದೆ, ಸೃಜನಶೀಲತೆ, ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಸ್ವಾಯತ್ತ ನಿರ್ಧಾರದ ಸಾಮರ್ಥ್ಯವನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿತು ಜೊತೆಗೆ ಬೋಧಕರು ಅಗತ್ಯವಿರುವ ತಾಂತ್ರಿಕ ಮಾರ್ಗದರ್ಶನವನ್ನು ನೀಡಿದರು.

ಕೊನೆಯ ದಿನವನ್ನು ಭಾಗವಹಿಸಿದ್ದ ವಿದ್ಯಾರ್ಥಿಗಳು ಪಡೆದಿದ್ದ ಸಾಮರ್ಥ್ಯಗಳ ಮೌಲ್ಯಮಾಪನಕ್ಕೆ ಮೀಸಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕೋಡಿಂಗ್ ಪ್ರಾವೀಣ್ಯ, ಸೆನ್ಸರ್ ಏಕೀಕರಣ ಮತ್ತು ರೋಬೋಟಿಕ್ಸ್ ಸಮಸ್ಯೆ-ಪರಿಹಾರ ಕುರಿತು ಪ್ರಾಯೋಗಿಕ ಕಾರ್ಯಗಳು ಮತ್ತು ಸೈದ್ಧಾಂತಿಕ ಪ್ರಶ್ನೆಗಳ ಮಿಶ್ರಣದ ಮೂಲಕ ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ರಚನಾತ್ಮಕ ಪ್ರತಿಕ್ರಿಯೆ ನೀಡಿ, ಅವರು ಪ್ರದರ್ಶಿಸಿದ ಪಾಂಡಿತ್ಯ ಮತ್ತು ಮುಂದಿನ ಅಭಿವೃದ್ಧಿ ಅಗತ್ಯವಿರುವ ಕ್ಷೇತ್ರಗಳನ್ನು ತೋರಿಸಲಾಯಿತು. ತಿಂಕ್‌ಪ್ರೋ ಅಕಾಡೆಮಿಯ ಬೋಧಕರಾದ ವರುಣ್ ಶರ್ಮಾ ಅವರಿಗೆ ಕೃತಜ್ಞತೆ ಸೂಚಿಸಿ ವಂದನೆ ಸಮರ್ಪಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.





