ಕಲ್ಲಡ್ಕ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ಬಾಲವಿಕಾಸ ಸಮಿತಿ ಮಜಿ ಅಂಗನವಾಡಿ ಕೇಂದ್ರ ವತಿಯಿಂದ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನ. 29 ರಂದು ನಡೆಯಿತು.

ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಗೋಲಿಮಾರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನೆಹರು ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಶುಭ ಹಾರೈಸಿದರು.

ಈ ವೇಳೆ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮಾ ಪಿ ಜಿ ಅವರು ಮಾತನಾಡಿ ಮಕ್ಕಳು ಹಿರಿಯರನ್ನು ಅನುಕರಣೆ ಮಾಡುವ ಮೂಲಕ ಕಲಿಯುತ್ತಾರೆ. ಈ ಕಾರಣಕ್ಕಾಗಿ ಹಿರಿಯರ ನಡತೆಯು ಮಾದರಿಯಾಗಿರಬೇಕು, ಮಾತೃಭಾಷೆ ಹಾಗೂ ಸಂಸ್ಕಾರಯುತ ಶಿಕ್ಷಣ ಮನೆಯಲ್ಲಿ ನೀಡಿ ಬುನಾದಿ ಶಿಕ್ಷಣವನ್ನು ಒದಗಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಭಾರತಿ ವಹಿಸಿದ್ದರು. ಮಕ್ಕಳ ಪೋಷಕರು ಮಕ್ಕಳಿಗೆ ಆರತಿ ಮಾಡಿ ತಿಲಕವಿಟ್ಟು ಶುಭ ಕೋರಿದರು.

ಈ ವೇಳೆ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.
ಈ ಸಂದರ್ಭ ವೀರಕಂಭ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಪೂಜಾರಿ, ಸದಸ್ಯರಾದ ಮೀನಾಕ್ಷಿ ಸುನೀಲ್, ಸಂಜೀವಿನಿ ಒಕ್ಕೂಟದ ಎಲ್ ಸಿ ಆರ್ ಪಿ ಗಳಾದ ಜಯಂತಿ, ರೂಪಶ್ರೀ, ಹಿರಿಯ ನಾಗರೀಕರಾದ ಜಿನ್ನಪ್ಪ ಮೂಲ್ಯ ಮಜಿ, ಸಮಿತಿಯ ಸದಸ್ಯರಾದ ಪ್ರಕಾಶ್ ಬೆತ್ತಸರವ್, ಚಿನ್ನಾ ಮೈರಾ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ಕಾಯ೯ಕ್ರಮದಲ್ಲಿ ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಜ್ಯೋತಿ ಲಕ್ಷ್ಮೀ ಹಾಗೂ ಶ್ರೀ ಶಾರದಾ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಪಾಲ್ಗೊಂಡಿದ್ದರು.
ಅಂಗನವಾಡಿ ಶಿಕ್ಷಕಿ ಸುಮತಿ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು, ಅಂಗನವಾಡಿ ಸಹಾಯಕಿ ಮಮತ ಸಹಕರಿಸಿದರು.



