ಕಾಸರಗೋಡು: ಪುಲ್ಲೂರು ಕೊಡವಲಂ ಎಂಬಲ್ಲಿನ ಮನೆಯೊಂದರ ತೋಟದ ಕೆರೆಗೆ ಬಿದ್ದ ಚಿರತೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಮಧು ಎಂಬವರ ತೋಟದ ಕೆರೆಗೆ ನ. 23ರಂದು ಮುಸ್ಸಂಜೆ ಚಿರತೆ ಬಿದ್ದಿತ್ತು. ಮನೆಯ ಪೈಪಿನಲ್ಲಿ ನೀರು ಬಾರದೇ ಇದ್ದಾಗ, ನೀರಿಗಾಗಿ ಮೋಟಾರು ಪಂಪ್ ಚಲಾಯಿಸಲೆಂದು ಕೆರೆಯ ಬಳಿ ತೆರಳಿದಾಗ ಕೆರೆಯಲ್ಲಿ ಚಿರತೆ ಬಿದ್ದಿರುವುದು ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ರಕ್ಷಣೆಗೆ ಧಾವಿಸಿದ್ದಾರೆ.

ಕಾಞಂಗಾಡು ರೇಂಜ್ ಅರಣ್ಯ ಇಲಾಖೆ ಅಧಿಕಾರಿ ಜೋಸ್ ಮ್ಯಾಥ್ಯೂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಚಿರತೆ ಮರಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.




