ಸುರತ್ಕಲ್: ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್ನಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತರನ್ನು ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣ ಸಮೀಪದ ನಿವಾಸಿ ಭಾಸ್ಕರ ಎಂದು ಗುರುತಿಸಲಾಗಿದೆ. ಅವರು ಶೀಟ್ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಾಗಿದ್ದರು ಎನ್ನಲಾಗಿದೆ.

ಕೃಷ್ಣಾಪುರ 6ನೇ ಬ್ಲಾಕ್ನ ವಸತಿ ಸಮುಚ್ಚಯವೊಂದರಲ್ಲಿ ತಗಡು ಶೀಟ್ನ ಮೇಲ್ಛಾವಣಿ ನಿರ್ಮಾಣಕ್ಕಾಗಿ ಕಬ್ಬಿಣದ ರಾಡ್ನಿಂದ ಅಳತೆ ತೆಗೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಬ್ಬಿಣದ ರಾಡ್ ಅನ್ನು ಕಂಕುಳಲ್ಲಿಟ್ಟುಕೊಂಡು ತಿರುಗುತ್ತಿದ್ದಾಗ ಸಮೀಪದಲ್ಲಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿದ್ದು, ವಿದ್ಯುತ್ ಪ್ರವಹಿಸಿ ಭಾಸ್ಕರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಭಾಸ್ಕರ ಅವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.


