ದೆಹಲಿ: ಸಿಗ್ನಲ್‌ನಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ನ. 10 ರಂದು ಭಾರಿ ಸ್ಫೋಟ ಸಂಭವಿಸಿ 9ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು 24ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಕೆಂಪುಕೋಟೆಯ ಬಳಿ ನಡೆದಿದೆ.
ಜನರು ತಮ್ಮ ಕಚೇರಿಗಳಿಂದ ಮತ್ತು ಚಾಂದಿನಿ ಚೌಕ್ ಮಾರುಕಟ್ಟೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ 10 ಅಗ್ನಿಶಾಮಕ ದಳದ ವಾಹನಗಳು ಧಾವಿಸಿದ್ದು, ಅರ್ಧ ಗಂಟೆಯೊಳಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದಿಂದ ಆರು ಕಾರುಗಳು, ಎರಡು ಇ-ರಿಕ್ಷಾಗಳು ಮತ್ತು ಒಂದು ಆಟೋ ರಿಕ್ಷಾ ಬೆಂಕಿಗೆ ಆಹುತಿಯಾಗಿವೆ. ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ, ಕೆಲವು ಮೀಟರ್ ದೂರದಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿವೆ. ಕೆಲ ಕಿಲೋಮೀಟರ್ ದೂರದಲ್ಲಿದ್ದ ಐಟಿಓವರೆಗೆ ಸ್ಫೋಟದ ಶಬ್ದ ಕೇಳಿಸಿದೆ ಎನ್ನಲಾಗಿದೆ.

ಸ್ಪೋಟದ ಹಿನ್ನೆಲೆಯಲಿ ದೆಹಲಿ ನಗರದಾದ್ಯಂತ ಬಿಗಿ ಭದ್ರತೆ ಮಾಡಲಾಗಿದ್ದು ನೆರೆ ರಾಜ್ಯ ಉತ್ತರ ಪ್ರದೇಶದಲ್ಲಿ ಕೂಡ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ನಗರಕ್ಕೆ ಪ್ರವೇಶಿಸುವ ಮತ್ತು ಹೊರ ಹೋಗುವ ವಾಹನಗಳ ತಪಾಸಣೆ ಕೂಡ ನಡೆಯುತ್ತಿದೆ.



