ಉಡುಪಿ: ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಬ್ಯಾಂಕ್ ಗೆ ವಂಚಿಸಿದ್ದ ಆರೋಪದ ಮೇಲೆ ಶಿರ್ವ ಪೊಲೀಸರು ಐವರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಗಳನ್ನು ಅಂಬಲಪಾಡಿ ಕಪ್ಪೆಟ್ಟು ನಿವಾಸಿ ಪುನೀತ್ ಆನಂದ್ ಕೋಟ್ಯಾನ್, ತೆಂಕನಿಡಿಯೂರು ಲಕ್ಷ್ಮೀನಗರ ನಿವಾಸಿ ಸುದೀಪ್, ಏಣಗುಡ್ಡೆ ಕಟಪಾಡಿ ನಿವಾಸಿ ರಂಜನ್ ಕುಮಾರ್, ಅಲಂಗಾರ ಪೆರ್ಡೂರು ಸರ್ವಜೀತ್ ಎಚ್, ಮತ್ತು ಮಹಾರಾಷ್ಟ್ರ ದ ನಿವಾಸಿ ರಾಜೇಶ್ ದಿಲೀಪ್ ಪಾಟೀಲ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 4.3 ಲಕ್ಷ ರೂ. ನಗದು, ನಕಲಿ ಹಾಲ್‌ಮಾರ್ಕ್ ಸ್ಟಾಂಪ್‌ಗಳನ್ನು ತಯಾರಿಸಲು ಬಳಸುವ ಲೇಸರ್ ಯಂತ್ರ ಮತ್ತು ಕಂಪ್ಯೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಬಳಸಿಕೊಂಡು ಸಾಲ ವಂಚನೆ ಪ್ರಕರಣಗಳು ಹೆಚ್ಚಾದ ನಂತರ, ಪೊಲೀಸರು ಸಾರ್ವಜನಿಕ ದೂರುಗಳ ಮೇರೆಗೆ ಮೂರು ವಿಶೇಷ ತಂಡಗಳನ್ನು ರಚಿಸಿ ಬೆಂಗಳೂರು, ಗೋವಾ, ಮುಂಬೈ ಮತ್ತು ದೆಹಲಿಯಿಂದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.




