Breaking
4 Jul 2026, Sat

ಪೊಳಲಿ ದೇವಸ್ಥಾನದಲ್ಲಿ ನೂತನ ಅನ್ನಛತ್ರ, ಸಭಾಂಗಣ ಕಾಮಗಾರಿ ಪ್ರಗತಿ ಪರಿಶೀಲನೆ

ಬಂಟ್ವಾಳ: ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿರುವ ನೂತನ ಅನ್ನಛತ್ರ ಹಾಗೂ ಸಭಾಂಗಣ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಅನ್ನಛತ್ರ ಮತ್ತು ಸಭಾಂಗಣ ನಿರ್ಮಾಣ ಕಾಮಗಾರಿಗಳ ಪ್ರಸ್ತುತ ಹಂತ, ತಾಂತ್ರಿಕ ಅಂಶಗಳು, ಅಗತ್ಯ ಮೂಲಸೌಕರ್ಯ, ಕಾಮಗಾರಿಯ ಗುಣಮಟ್ಟ ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳೊಂದಿಗೆ ಸಮಗ್ರ ಚರ್ಚೆ ನಡೆಯಿತು.

ಈ ವೇಳೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ವರ್ಷಪೂರ್ತಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ ಎಂದು ಹೇಳಿದರು.

ಭಕ್ತಾದಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ನೂತನ ಅನ್ನಛತ್ರ ಹಾಗೂ ಸಭಾಂಗಣ ಅತ್ಯಂತ ಉಪಯುಕ್ತ ಯೋಜನೆಯಾಗಿದ್ದು, ಕಾಮಗಾರಿಯಲ್ಲಿ ಯಾವುದೇ ವಿಳಂಬವಾಗದಂತೆ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನ್ನದಾಸೋಹ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಈ ಯೋಜನೆ ರೂಪಿಸಲಾಗಿದ್ದು, ಭಕ್ತರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಿದೆ. ಕಾಮಗಾರಿಯ ಪ್ರತಿಯೊಂದು ಹಂತವನ್ನು ನಿಯಮಿತವಾಗಿ ಪರಿಶೀಲಿಸಿ, ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಿತ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಮೊಕ್ತೇಸರ ಮಾಧವ ಭಟ್, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂದ್ರ ಮೋಹನ್, ಇಂಜಿನಿಯರ್‌ಗಳಾದ ಲಕ್ಷ್ಮಣ್ ಪೂಜಾರಿ ಹಾಗೂ ಸುಪ್ರೀತ್ ಆಳ್ವ ಉಪಸ್ಥಿತರಿದ್ದು, ಕಾಮಗಾರಿಯ ಪ್ರಗತಿ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ವಿವರಗಳನ್ನು ಸಭೆಗೆ ಸಲ್ಲಿಸಿದರು.

Leave a Reply

Your email address will not be published. Required fields are marked *