Breaking
25 Sep 2026, Fri

ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ : ಪ್ರಕರಣ ದಾಖಲು

ಮಂಗಳೂರು: ವ್ಯಕ್ತಿಯೋರ್ವರಿಗೆ ಆನ್ ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭಾಂಶ ದೊರೆಯುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

ದೂರುದಾರರು ಸೆ.9 ರಂದು ಫೇಸ್ ಬುಕ್ ನೋಡುತ್ತಿರುವ ಸಂದರ್ಭದಲ್ಲಿ ಕಾವ್ಯ ಶೆಟ್ಟಿ ಹೆಸರಿನಲ್ಲಿ ಫ್ರೆಂಡ್ಸ್ ರಿಕ್ವೆಸ್ಟ್ ಬಂದಿದೆ. ಅದನ್ನು ಎಕ್ಸೆಪ್ಟ್ ಮಾಡಿ ಅವರೊಂದಿಗೆ ಚಾಟ್ ಮಾಡಿದ್ದಾರೆ. ಆಕೆ ತಾನು ಮುಂಬಯಿನಲ್ಲಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು, ಅದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದಾಳೆ.

ಇದರಿಂದ ಆಸಕ್ತಿಗೊಂಡು ಟ್ರೇಡಿಂಗ್‌ನಲ್ಲಿ ಕೆಲಸ ಮಾಡಲು ಒಪ್ಪಿದ ದೂರುದಾರಿಗೆ ಕಾವ್ಯ ಶೆಟ್ಟಿ ತನ್ನ ವಾಟ್ಸಾಪ್ ನಂಬರ್‌ನಿಂದ ಲಿಂಕ್ ನ್ನು ಕಳುಹಿಸಿ ಅದಕ್ಕೆ ಸೇರುವಂತೆ ತಿಳಿಸಿದ್ದಾಳೆ. ಲಿಂಕ್ ಒತ್ತಿದಾಗ ಟ್ರೇಡಿಂಗ್ ಆ್ಯಪ್ ತೆರೆದುಕೊಂಡಿದ್ದು, ಬಳಿಕ ಹೆಸರು, ಮೇಲ್ ಐಡಿ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸಿದ್ದಾರೆ.

ಬಳಿಕ ಟ್ರೇಡಿಂಗ್‌ ನಲ್ಲಿ ಷೇರ್ ಖರೀದಿಸಲು 40,000 ರೂ. ಹಣ ಪಾವತಿ ಮಾಡುವಂತೆ ತಿಳಿಸಿದಂತೆ, ಸೆ.13 ರಂದು ಪಾವತಿ ಮಾಡಿದ್ದು, ಲಾಭಾಂಶವಾಗಿ 9,504 ರೂ. ಹಣ ಖಾತೆಗೆ ಜಮೆಯಾಗಿದೆ. ಅನಂತರ 2,00,000 ರೂ. ಹಣ ಹಾಕಿದಾಗ ಅದಕ್ಕೆ ಲಾಭಾಂಶವಾಗಿ 23,760 ರೂ. ಜಮೆಯಾಗಿದೆ. ಹೀಗೆ ಹಂತ ಹಂತವಾಗಿ ಒಟ್ಟು 32,06,880 ರೂ. ಹಣವನ್ನು ಸೆ.13 ರಿಂದ ಅ.24 ರ ವರೆಗೆ ಕಾವ್ಯ ಶೆಟ್ಟಿ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ, ಅನಂತರ ಯಾವುದೇ ಲಾಭಾಂಶವೂ ದೊರೆಯದೆ, ಹೂಡಿಕೆ ಮಾಡಿದ ಹಣವೂ ವಾಪಾಸು ನೀಡದೆ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *