Breaking
21 Mar 2026, Sat

ಬೆಳ್ತಂಗಡಿಯಲ್ಲಿ ಮೂವರು ಮಕ್ಕಳಿಗೆ ಕಡಿದ ವಿಷಪೂರಿತ ಕನ್ನಡಿ ಹಾವು, ಪ್ರಾಣ ಉಳಿಸಿದ ನಾಟಿ ವೈದ್ಯ ಸೂರಪ್ಪ ಪೂಜಾರಿ

ಬೆಳ್ತಂಗಡಿ: ಒಂದೇ ಮನೆಯೊಳಗೆ ಮಲಗಿದ್ದ ಮೂವರು ಮಕ್ಕಳಿಗೆ ವಿಷಪೂರಿತ ಕನ್ನಡಿ ಹಾವೊಂದು ಕಡಿದ ಘಟನೆ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಸಮೀಪದ ಕುದ್ರಡ್ಕದಲ್ಲಿ ನ.2 ರಂದು ನಡೆದಿದೆ.

ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಅವರ ಮಗ ದಕ್ಷಿತ್ ಮತ್ತು ಅಕ್ಕನ ಮಕ್ಕಳಾದ ವಿಶ್ಮಿತಾ ಹಾಗೂ ಅನ್ವಿತಾ ಒಂದೇ ಕೋಣೆಯಲ್ಲಿ ಮಲಗಿದ್ದು, ರಾತ್ರಿ 11.30ರ ಸುಮಾರಿಗೆ ಕೋಣೆಯೊಳಗೆ ಪ್ರವೇಶಿಸಿದ ವಿಷಪೂರಿತ ಕನ್ನಡಿ ಹಾವು ದಕ್ಷಿತ್ ನ ಎರಡೂ ಕೈಗಳಿಗೆ ಕಚ್ಚಿದೆ.

ಬಳಿಕ ವಿಶ್ಮಿತಾ ಹಾಗೂ ಅನ್ವಿತಾ ಅವರ ಕೈಗೂ ಕಚ್ಚಿದ್ದು ಮಕ್ಕಳು ಭಯ ಭೀತಿಯಿಂದ ಕಂಗೆಟ್ಟಿದ್ದರು.

ಈ ವೇಳೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಅನಿವಾರ್ಯ ಇದ್ದರೂ ಉಪ್ಪಿನಂಗಡಿಯನ್ನು ಸಂಪರ್ಕಿಸುವ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯ ದುಃ ಸ್ಥಿತಿಯಿಂದಾಗಿ ಆಸ್ಪತ್ರೆ ತಲುಪುವುದು ವಿಳಂಬವಾಗಿ ಪ್ರಾಣಾಪಾಯವಾಗುವ ಸಾಧ್ಯತೆ ಇರುವ ಸಾಧ್ಯತೆ ಇತ್ತು. ಇದರಿಂದ ಕಂಗೆಟ್ಟ ಮನೆಯವರು ತಣ್ಣೀರುಪಂತ ಗ್ರಾಮದಲ್ಲಿನ ನಾಟಿ ವೈದ್ಯ ಸೂರಪ್ಪ ಪೂಜಾರಿ (77) ಅವರ ಮನೆ ಬಾಗಿಲು ತಟ್ಟಿದ್ದರು.

ಮಧ್ಯರಾತ್ರಿ ಹಾವು ಕಡಿತಕ್ಕೊಳಗಾಗಿ ಮನೆಗೆ ಬಂದ ಮೂವರು ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಸೂರಪ್ಪ ಪೂಜಾರಿ ಅವರು ಔಷಧವನ್ನು ಮಕ್ಕಳಿಗೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

Leave a Reply

Your email address will not be published. Required fields are marked *